

ರಾಯಚೂರು ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಹಂಚಿಕೆ ಮಾಡಿರುವ ಸರ್ಕಾರ ಲೋಪಗಳನ್ನು ಸರಿಪಡಿಸಲು ಒತ್ತಾಯಿಸಿ ಅ.10 ರಂದು ಬೆಂಗಳೂರಿನ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಮನೆಗೆ ಮುತ್ತಿಗೆ ಹಾಕಲಾಗುತ್ತದೆಂದು ಎಂದು ಒಳ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಮಾರೆಪ್ಪ ವಕೀಲ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ತಾನೇ ರಚಿಸಿದ ನ್ಯಾ.ನಾಗಮೋಹನದಾಸ್ ಆಯೋಗ ವರದಿಯನ್ನು ಬದಿಗೆ ಸರಿಸಿ ಮೀಸಲು ಹಂಚಿಕೆ ಮಾಡಿದೆ. ಐದು ಪ್ರವರ್ಗಗಳನ್ನು ಹಂಚಿಕೆ ಮಾಡಿ ಆದಿ ದ್ರಾವಿಡ, ಆದಿ ಕರ್ನಾಟಕ, ಆದಿ ಆಂದ್ರ ಸಮಸ್ಯೆ ಪರಿಹರಿಸದೇ ಎರಡು ಕಡೆ ಮೀಸಲು ಪಡೆಯಲು ಅವಕಾಶ ನೀಡಿರುವದು ಮಾದಿಗ ಸಮಾಜಕ್ಕೆ ಉದ್ದೇಶ ಪೂರಕ ಅನ್ಯಾಯ ಮಾಡಿದಂತಾಗಿದೆ.
ಸಮಸ್ಯೆಯನ್ನು ಬಗೆಹರಿಸುವಂತೆ ಮಾದಿಗ ಸಮಾಜದ ಅನೇಕ ಮುಖಂಡರುಗಳು ಮುಖ್ಯಮಂತ್ರಿಗಳು ಹಾಗೂ ರಾಜ್ಯ ಮುಖ್ಯಕಾರ್ಯದರ್ಶಿಗಳಿಗೆ ಮನವಿ ಮಾಡಲಾಗಿತ್ತು. ಆದರೂ ಸಮಸ್ಯೆ ಪರಿಹಾರ ಕಂಡಿಲ್ಲ. ಬಲಗೈಸಂಬಂದಿತ ಜಾತಿಗಳಿಗೆ ಅನುಕೂಲ ಮಾಡಿಕೊಡುವ ಹುನ್ನಾರಗಳು ನಡೆಯುತ್ತಿರುವದನ್ನು ವಿರೋಧಿಸಿ ಎರಡನೇ ಹಂತದ ಹೋರಾಟ ಪ್ರಾರಂಭಿಸಲಾಗುತ್ತಿದೆ. ಸರಿ ಸುಮಾರು 50ಲಕ್ಷ ಜನಸಂಖ್ಯೆ ಇರುವ ಆದಿ ಕರ್ನಾಟಕ, ಆದಿ ದ್ರಾವಡ ಸಮಾಜದ ಜನರಿಗೆಗ ಮೂಲ ಜಾತಿ ಪ್ರಮಾಣ ಪತ್ರದ ಆಧಾರದ ಮೇಲೆ ಮೀಸಲು ಹಂಚಿಕೆ ಮಾಡಬೇಕಿತ್ತು. ಆದರೆ ಪ್ರವರ್ಗ ’ಎ’ ಮತ್ತು ’ಇ ’ಎರಡರಲ್ಲಿಯೂ ಮೀಸಲು ಪಡೆಯುವದಿರಂದ ಅನ್ಯಾಯವಾಗಲಿದೆ. ಕೂಡಲೇ ಸರಿಪಡಿಸದೇ ಹೋದರೆ ಮುಂದೆ ಮುಖ್ಯಮಂತ್ರಿಗಳೇ ಹೊಣೆಯಾಗುತ್ತಾರೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಎಂ.ವಿರೂಪಾಕ್ಷಿ, ಜೆ.ಬಿ.ರಾಜು, ಹೇಮರಾಮ ಅಸ್ಕಿಹಾಳ, ನರಸಿಂಹಲು ಮರ್ಚಟ್ಹಾಳ, ಆಂಜಿನೇಯ್ಯ ಉಟ್ಟೂರು, ಲಕ್ಷ್ಮಣ ಇದ್ದರು.