

ಕಿರಣ್ ಮಾದರಹಳ್ಳಿ ಚಾಮರಾಜನಗರ
ಶಿಕ್ಷಣ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‌ಕುಮಾರ್ ಅವರು ಬುಧವಾರ ಕೈಗೊಂಡಿರುವ ಜಿಲ್ಲಾ ಪ್ರವಾಸದಲ್ಲಿ ಯಾವೆಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರೆಯಬಹುದೆಂಬ ನಿರೀಕ್ಷೆ ಹೆಚ್ಚಾಗಿದೆ.
ಸಚಿವ ಸುರೇಶ್‌ಕುಮಾರ್ ಅವರು ಚಾಮರಾಜನಗರದ ಉಸ್ತುವಾರಿ ವಹಿಸಿಕೊಂಡ ನಂತರ ತಿಂಗಳಿಗೊಮ್ಮೆ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಜಿಲ್ಲಾದ್ಯಂತ ಸಂಚರಿಸುತ್ತಿದ್ದು, ಆಡಳಿತದಲ್ಲಿ ಚುರುಕು ಮುಟ್ಟಿಸಿದ್ದಾರೆ. ಇದರ ಪರಿಣಾಮ ಗುಂಡ್ಲುಪೇಟೆ ತಾಲೂಕಿನ ವಡ್ಡಗೆರೆ ಕೆರೆಗೆ ನೀರು ಹರಿಸುವ ಯೋಜನೆ, ಗೋಪಿನಾಥಂನ ಸರ್ಕಾರಿ ಉನ್ನತೀಕರಿಸಿ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮ ಆರಂಭ ಸೇರಿದಂತೆ ಹಲವು ಪ್ರಯೋಜನಗಳಾಗಿವೆ. ಇಂದು ಸಚಿವ ಸುರೇಶ್‌ಕುಮಾರ್ ಜಿಲ್ಲಾ ಭೇಟಿ ಮತ್ತಷ್ಟು ಬದಲಾವಣೆಗಳಿಗೆ ನಾಂದಿಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಸಮಸ್ಯೆಗಳಿಗೆ ಸಿಗುವುದೇ ಪರಿಹಾರ?: ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿರುವ ಅಂಗವಿಕಲರ ಸಾಧನ-ಸಲಕರಣೆಗಳ ವಿತರಣೆ ಸಮಾರಂಭದಲ್ಲಿ ಅಂಗವಿಕಲರ ಸಮಸ್ಯೆಗಳೂ ಬಗೆಹರಿಯಬೇಕಿದೆ.
ಸರ್ಕಾರದ ಎಲ್ಲ ಅಭಿವೃದ್ಧಿ ಯೋಜನೆಗಳಲ್ಲಿ ಅಂಗವಿಕಲರಿಗಾಗಿ ಶೇ.5ರಷ್ಟು ಅನುದಾನ ಸೂಕ್ತ ರೀತಿಯಲ್ಲಿ ಬಳಕೆಯಾಗಬೇಕು. ಯುಡಿಐಡಿ ಕಾರ್ಡ್ ಅನ್ನು ಜಿಲ್ಲಾಸ್ಪತ್ರೆ ಹೊರತಾಗಿ ತಾಲೂಕು ಕೇಂದ್ರಗಳಲ್ಲೂ ವಿತರಣೆ ಮಾಡಬೇಕಿದೆ. ತಾಲೂಕಿನ ಯಡಪುರದ ವೈದ್ಯಕೀಯ ಕಾಲೇಜಿಗೆ ಇದೇ ವೇಳೆ ಭೇಟಿ ನೀಡಲಿರುವ ಸಚಿವ ಸುರೇಶ್‌ಕುಮಾರ್ ಅವರು ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ವೀಕ್ಷಣೆ ಮಾಡಲಿದ್ದು, ನಂತರ ಪ್ರಗತಿ ಪರಿಶೀಲನಾ ಸಭೆ ನಡೆಸುವರು.
ನೂತನ ಆಸ್ಪತ್ರೆ ಕಟ್ಟಡ ಕಾಮಗಾರಿಗೆ ಉಳಿದ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರದಿಂದ ಹೆಚ್ಚುವರಿ ಅನುದಾನ ತರುವ ನಿಟ್ಟಿನಲ್ಲಿ ತೀರ್ಮಾನಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ ಎಂದು ವೈದ್ಯಕೀಯ ಕಾಲೇಜೀನ ಡೀನ್ ಡಾ.ಸಂಜೀವ್ ತಿಳಿಸಿದ್ದಾರೆ.
ಪ್ರಸ್ತುತ ಜಿಲ್ಲಾಸ್ಪತ್ರೆಯಲ್ಲಿ ಸುಸಜ್ಜಿತ ಸೌಲಭ್ಯಗಳಿಲ್ಲದೆ ರೋಗಿಗಳು ಹೊರ ಜಿಲ್ಲೆಗಳಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೊಸ ಕಟ್ಟಡ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಂಡರೆ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಲಿದೆ.
ಕಳೆದ 1 ವರ್ಷಗಳಿಂದ ಜಿಲ್ಲಾಡಳಿತ ಭವನದಲ್ಲಿ ಅಂಗವಿಕಲರಿಗೆ ವಿತರಿಸದೆ ನಿಲ್ಲಿಸಿರುವ 17 ತ್ರಿಚಕ್ರ ವಾಹನಗಳನ್ನು ಫಲಾನುಭವಿ ಗಳಿಗೆ ವಿತರಿಸಬೇಕಿದೆ. ಮುಖ್ಯವಾಗಿ ಸಚಿವರು ಮತ್ತು ಅಧಿಕಾರಿಗಳ ನೇತೃತ್ವದಲ್ಲಿ ಅಂಗವಿಕಲರಿಗಾಗಿ ವಿಶೇಷ ಸಭೆ ಕರೆಯಬೇಕು.
ವಿ.ಕುಮಾರ್, ನಿರ್ದೇಶಕ, ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘ ಚಾಮರಾಜನಗರ