

ನಾಗಮಂಗಲ : ರೈತರ ಹಿತ ಕಾಪಾಡುವುದೇ ರಾಜ್ಯ ಸರ್ಕಾರದ ಮೊದಲ ಅದ್ಯತೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.ತಾಲೂಕಿನ ಬೆಳ್ಳೂರಿನಲ್ಲಿ 2 ಕೋಟಿ ರೂ.ವೆಚ್ಚದ ರೈತ ಸಂಪರ್ಕ ಕೇಂದ್ರದ ಕಟ್ಟಡ ಮತ್ತು ಗೋದಾಮು ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕೃಷಿ ಇಲಾಖೆ ಮೂಲಕ ರೈತರಿಗೆ ಸಿಗಬಹುದಾದ ಎಲ್ಲ ಸವಲತ್ತುಗಳೂ ಒಂದೇ ಕಡೆ ದೊರಕುವಂತೆ ಮಾಡಲು ಜಿಲ್ಲೆಯಲ್ಲಿ 8 ರೈತ ಸಂಪರ್ಕ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದೆ. ರೈತ ಸಂಪರ್ಕ ಕೇಂದ್ರಗಳ ಮೂಲಕ ಯಾವುದೇ ಬೆಳೆಗಳನ್ನು ಬೆಳೆಯುವ ಪದ್ಧತಿ, ಅಧಿಕ ಇಳುವರಿ ತೆಗೆಯುವ ವಿಧಾನ ಮತ್ತು ಮಣ್ಣಿತ ಫಲವತ್ತತೆ ಸೇರಿದಂತೆ ಹಲವು ವಿಚಾರಗಳ ಸಮಗ್ರ ಮಾಹಿತಿಯನ್ನು ಕೃಷಿಕರಿಗೆ ನೀಡಲಾಗುವುದು. ಕೃಷಿ ಚಟುವಟಿಕೆ ಬಗ್ಗೆ ರೈತರಿಗೆ ಯಾವುದೇ ಮಾಹಿತಿ ಅಗತ್ಯವಿದ್ದಲ್ಲಿ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಬಹುದು ಎಂದರು.
ಬೆಳೆ ವಿಮೆ ನೋಂದಣಿ ಮಾಡಿಸಿ: ಕೃಷಿಕರು ಕಡ್ಡಾಯವಾಗಿ ಬೆಳೆ ವಿಮೆ ನೋಂದಣಿ ಮಾಡಿಸಬೇಕು. ಕೃಷಿ ಇಲಾಖೆ ಮೂಲಕ ಸಬ್ಸಿಡಿ ದರದಲ್ಲಿ ಸಿಗಬಹುದಾದ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳು ಹೋಬಳಿ ಕೇಂದ್ರಗಳಲ್ಲಿರುವ ರೈತ ಸಂಪರ್ಕ ಕೇಂದ್ರಗಳಲ್ಲಿಯೇ ದೊರಕುತ್ತವೆ.
ಹಾಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೃಷಿ ಚಟುವಟಿಕೆಗೆ ಸಂಬಂಧಿಸಿದ ಎಲ್ಲಾ ಸೌಲಭ್ಯ ಒಂದೇ ಕಡೆ ಸಿಗಬೇಕೆಂಬ ಉದ್ದೇಶದಿಂದ ರೈತ ಸಂಪರ್ಕ ಕೇಂದ್ರಗಳನ್ನು ಮತ್ತಷ್ಟು ಬಲಿಷ್ಠಗೊಳಿಸಲಾಗುತ್ತಿದೆ ಎಂದರು.