

ಬೆಂಗಳೂರು ಗ್ರಾಮಾಂತರ: ರಾಜ್ಯ ಸಚಿವ ಸಂಪುಟ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಹೆಚ್ಚಿಸುವ ಒಮ್ಮತದ ನಿರ್ಣಯ ಕೈಗೊಳ್ಳುವ ಮೂಲಕ ವಾಲ್ಮೀಕಿ ಜಯಂತಿ ಅಂಗವಾಗಿ ಉಡುಗೊರೆ ನೀಡಿದೆ ಎಂದು ಪೌರಾಡಳಿತ ಮತ್ತು ಸಣ್ಣಕೈಗಾರಿಕೆ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಹೊಸಕೋಟೆಯಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿದರು. ಈ ನಿರ್ಣಯ ಅತ್ಯಂತ ಸ್ವಾಗತಾರ್ಹವಾಗಿದ್ದು, ಈ ಮೂಲಕ ಸರ್ಕಾರ ಐತಿಹಾಸಿಕ ಹೆಜ್ಜೆ ಇಟ್ಟಿದೆ ಎಂದು ಹೇಳಿದರು
ಹೆಮ್ಮೆ ಎನಿಸುತ್ತದೆ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ, ಅಲೆಮಾರಿಗಳು ಹಾಗೂ ಅರೆ ಅಲೆಮಾರಿಗಳ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪನೆ ಸೇರಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯ ಎಲ್ಲ ಶಿಫಾರಸುಗಳ ಅನುಷ್ಠಾನಕ್ಕೆ ಮುಂದಾಗಿರುವ ಸರ್ಕಾರದ ಸಚಿವ ಸಂಪುಟದ ಭಾಗವಾಗಿರುವುದು ಹೆಮ್ಮೆ ಎನಿಸುತ್ತಿದೆ ಎಂದರು.
ವಿಶೇಷ ಸಚಿವ ಸಂಪುಟದ ತೀರ್ಮಾನದಿಂದ ಪರಿಶಿಷ್ಟ ಜಾತಿ ಮೀಸಲಾತಿ ಶೇ.15 ರಿಂದ 17ಕ್ಕೆ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿ ಶೇ.3ರಿಂದ 7ಕ್ಕೆ ಹೆಚ್ಚಳವಾಗಲಿದ್ದು, ಈ ಸಂಬಂಧ ಕೆಲವೇ ದಿನಗಳಲ್ಲಿ ಸರ್ಕಾರಿ ಆದೇಶ ಹೊರಬೀಳಲಿದೆ ಎಂದರು.
ಉಳಿದ ಸಮುದಾಯಗಳಿಗೂ ನ್ಯಾಯ: ಕುರುಬ ಸಮುದಾಯ ಸೇರಿ ಮತ್ತಿತರ ಹಿಂದುಳಿದ ಸಮುದಾಯಗಳ ಮೀಸಲಾತಿ ವಿಷಯ ಸರ್ಕಾರದ ಮುಂದೆ ಪ್ರಸ್ತಾವನೆ ಇದ್ದು, ಮುಂದಿನ ದಿನಗಳಲ್ಲಿ ಈ ಎಲ್ಲ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ದೊರಕಲಿದೆ ಎಂದು ಸಚಿವರು ಹೇಳಿದರು.
ಮಹಾಕಾವ್ಯದ ಮೂಲಕ ಚಿರಸ್ಥಾಯಿ: ವಾಲ್ಮೀಕಿ ಇತಿಹಾಸ ಕಂಡಂಥ ಮಹಾನ್ ಪುರುಷರಲ್ಲಿ ಅಗ್ರಗಣ್ಯರಾಗಿದ್ದಾರೆ. ರಾಮಾಯಣದಂಥ ಶ್ರೇಷ್ಠ ಮಹಾಕಾವ್ಯ ರಚಿಸುವ ಮೂಲಕ ಇತಿಹಾಸದ ಪುಟಗಳಲ್ಲಿ ಅವರು ಚಿರಸ್ಥಾಯಿಯಾಗಿದ್ದಾರೆ ಎಂದು ಎಂಟಿಬಿ ಗುಣಗಾನ ಮಾಡಿದರು. ರಾಮಾಯಣ ಪವಿತ್ರ ಗ್ರಂಥವಾಗಿದ್ದು, ಪೂಜನೀಯ ಸ್ಥಾನ ನೀಡಲಾಗಿದೆ. ರಾಮಾಯಣದ ರಾಮನ ಗುಣ, ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವ ಮೂಲಕ ರಾಮರಾಜ್ಯ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.
ಸನ್ಮಾರ್ಗದಲ್ಲಿ ನಡೆಯುವುದರಿಂದ ಎಲ್ಲರೂ ಮೋಕ್ಷ ಪಡೆಯಬಹುದೆಂಬುದು ಈ ಮಹಾಕಾವ್ಯದಲ್ಲಿ ಉಲ್ಲೇಖವಾಗಿದೆ. ರಾಮಾಯಣದಲ್ಲಿ ಸಾಮ್ರಾಜ್ಯ, ಅಲ್ಲಿನ ಸಂಸ್ಕೃತಿ, ಆಚಾರ- ವಿಚಾರ, ಭರತಖಂಡ ಸಂರಕ್ಷಣೆ, ಯುದ್ಧಗಳ ಸನ್ನಿವೇಶ ಎಲ್ಲವನ್ನು ಮಹಾಕಾವ್ಯದಲ್ಲಿ ಅರ್ಥಪೂರ್ಣವಾಗಿ ಚಿತ್ರಿಸಲಾಗಿದೆ ಎಂದರು.