

ನಂದಗುಡಿ: ಹೊಸಕೋಟೆ ತಾಲೂಕಿನ ಎಲ್ಲ ಹೋಬಳಿಗಳಿಗೂ ಶಾಶ್ವತ ನೀರಾವರಿ ಯೋಜನೆ ಕಲ್ಪಿಸುವ ಕನಸನ್ನು ಶೀಘ್ರದಲ್ಲೇ ನೆರವೇರಿಸಲಾಗುವುದು ಎಂದು ಸಚಿವ ಎಂಟಿಬಿ ನಾಗರಾಜ್ ಭರವಸೆ ನೀಡಿದರು.
ಹೋಬಳಿ ಇಟ್ಟಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನುಪನಹಳ್ಳಿ, ಈಸ್ತುರು, ಈ ಹೊಸಳ್ಳಿ ಗ್ರಾಮಗಳಲ್ಲಿ ಕೆಆರ್‌ಐಡಿಎಲ್ ಯೋಜನೆ ಅಡಿ 40 ಲಕ್ಷ ರೂ.ವೆಚ್ಚದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಈಗಾಗಲೇ ಜಡಿಗೇನಹಳ್ಳಿ ಹಾಗೂ ಅನುಗೊಂಡನಹಳ್ಳಿ ಹೋಬಳಿ ವ್ಯಾಪ್ತಿಯ ಕೆರೆಗಳಿಗೆ ನೀರನ್ನು ಪೂರೈಸುವ ಏತ ನೀರಾವರಿ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ಕೆಲವೇ ತಿಂಗಳಲ್ಲಿ ಕಾಮಗಾರಿಯೂ ಪೂರ್ಣಗೊಳ್ಳಲಿದೆ, ಉಳಿದಂತೆ ನಂದಗುಡಿ ಹಾಗೂ ಸೂಲಿಬೆಲೆ ಹೋಬಳಿ ವ್ಯಾಪ್ತಿಯ ಕೆರೆಗಳಿಗೆ ನೀರು ಪೂರೈಸುವ ಕನಸು ಶೀಘ್ರದಲ್ಲೇ ನೆರವೇರಿಸಲಾಗುವುದು ಎಂದು ಹೇಳಿದರು.
ಕ್ಷೇತ್ರದಲ್ಲಿ ನೀರಾವರಿ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಅವರಿಂದ ವಿಶೇಷ ಅನುದಾನದ ಬೇಡಿಕೆ ಇಟ್ಟಿದ್ದು, ಅವರಿಂದಲೂ ಸ್ಪಂದನೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಾಮಗಾರಿಗಳು ಚುರುಕು ಪಡೆಯಲಿವೆ ಎಂದರು.
ಸಮಸ್ಯೆಗಳಿದ್ದರೆ ನೇರವಾಗಿ ತಿಳಿಸಿ: ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಸ್ಥಳೀಯರೊಂದಿಗೆ ಚರ್ಚಿಸಿದ ಸಚಿವರು, ಸ್ಥಳೀಯವಾಗಿ ಯಾವುದೇ ಮೂಲಸೌಕರ್ಯ ಸಮಸ್ಯೆಗಳಿದ್ದರೆ ಅಥವಾ ಕಾನೂನು ಸುವ್ಯವಸ್ಥೆ ಬಗ್ಗೆ ತೊಂದರೆ ಇದ್ದರೆ ಅಧಿಕಾರಿಗಳ ಗಮನಕ್ಕೆ ತರಬೇಕು. ಒಂದು ವೇಳೆ ಅಧಿಕಾರಿಗಳು ಸ್ಪಂದಿಸದಿದ್ದರೆ ನೇರವಾಗಿ ನನ್ನ ಗಮನಕ್ಕೆ ತರಬಹುದು. ಇದರಲ್ಲಿ ಸಾರ್ವಜನಿಕರು ಮೀನಮೇಷ ಏಣಿಸುವುದು ಬೇಡ. ನನ್ನ ಕಚೇರಿ ಯಾವಾಗಲೂ ಸಾರ್ವಜನಿಕರಿಗಾಗಿ ತೆರೆದಿರುತ್ತದೆ ಎಂದು ಹೇಳಿದರು..