

ಮಂಗಳೂರು: ಕೋವಿಡ್-19 ಸೋಂಕಿನ ಎರಡನೇ ಅಲೆ ಬಗ್ಗೆ ಜನರು ಆತಂಕ ಪಡದೆ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಎರಡನೇ ಕೋವಿಡ್ ಅಲೆಯ ಆರಂಭಿಕ ಗುರುತಿಸುವಿಕೆ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ 7 ದಿನಗಳ ಸರಾಸರಿ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುವ ಮೂಲಕ ಆರೋಗ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ. ಕೋವಿಡ್-19 ಎರಡನೇ ಅಲೆ 2021ರ ಜನವರಿ - ಫೆಬ್ರವರಿಯಲ್ಲಿ ಹರಡುವ ಸಾಧ್ಯತೆ ಬಗ್ಗೆ ತಜ್ಞರ ಸಮಿತಿ ಮುನ್ನೆಚ್ಚರಿಕೆ ನೀಡಿದೆ.
ಈಗಿನ ನಿಯಮದನ್ವಯ ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಇತರರು ಆರ್‌ಟಿ-ಪಿಸಿಆರ್ ಮಾದರಿ ಪರೀಕ್ಷೆಗಳನ್ನು 15 ದಿನಗಳಿಗೊಮ್ಮೆ ಮಾಡಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ವಾರ್ ರೂಂ ರಚನೆ: ಜಿಲ್ಲೆಯಲ್ಲಿ ಪ್ರತಿದಿನ 2,950 ಆರ್‌ಟಿ-ಪಿಸಿಆರ್ ಸಹಿತ 3,350 ಕೋವಿಡ್-19 ಪರೀಕ್ಷೆಗಳನ್ನು ಫೆಬ್ರವರಿ 2021ರವರೆಗೆ ನಡೆಸಲಾಗುವುದು. ಸಾಂಕ್ರಾಮಿಕ ರೋಗದ ತಜ್ಞರ ತಂಡ ಎರಡನೆಯ ಅಲೆಯನ್ನು ಶೀಘ್ರವಾಗಿ ಪತ್ತೆ ಹಚ್ಚಲು ಜಿಲ್ಲೆಯಲ್ಲಿ ವಾರ್‌ರೂಂ ರಚನೆ ಸಹಿತ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು. ಆಂಬುಲೆನ್ಸ್ ಸೇವೆಗಳು ಸೇರಿದಂತೆ ಸರ್ಕಾರಿ/ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು, ಐಸಿಯು, ಐಸಿಯು ವೆಂಟಿಲೇಟರ್ ಇತ್ಯಾದಿಗಳ ಸಿದ್ಧತೆ ಮಾಡಿಕೊಳ್ಳಲಾಗುವುದು. ಜನವರಿ ಮೊದಲ ವಾರದಲ್ಲಿ ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿರುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉತ್ಸವ, ಸಭೆಗಳಿಗೆ ಷರತ್ತು: ಡಿಸೆಂಬರ್ ಮತ್ತು ಜನವರಿಯಲ್ಲಿ ವೈರಸ್ ವೇಗವಾಗಿ ಹರಡುವ ಸಾಧ್ಯತೆ ಇರುವ ಕಾರಣ ಜಿಲ್ಲೆಯಲ್ಲಿ ಉತ್ಸವ, ಧಾರ್ಮಿಕ ಸಭೆ ಸಮಾರಂಭಗಳು, ಸಾಮೂಹಿಕ ಕೂಟಗಳಿಗೆ ಷರತ್ತು ವಿಧಿಸಲಾಗಿದೆ. ಅನುಮತಿ ಪಡೆದಿದ್ದರೆ ಮದುವೆ ಸಮಾರಂಭಕ್ಕೆ ಗರಿಷ್ಠ 100 ಜನ, ರಾಜಕೀಯ ಹಾಗೂ ಸಾರ್ವಜನಿಕ ಸಭೆ ಸಮಾರಂಭಗಳಿಗೆ 200, ಶವಸಂಸ್ಕಾರಕ್ಕೆ 25 ಮತ್ತು ಉತ್ತರಕ್ರಿಯೆಗೆ 50 ಜನ ಸೇರಬಹುದಾಗಿದೆ. ಈಜುಕೊಳಗಳು, ಕ್ರೀಡೆಗಳು ಮುಂತಾದವುಗಳನ್ನು ಫೆಬ್ರವರಿವರೆಗೆ ತೆರೆಯದಂತೆ ನಿರ್ಬಂಧಿಸಲಾಗಿದೆ ಎಂದು ಸಚಿವ ಕೋಟ ತಿಳಿಸಿದ್ದಾರೆ.
ಯಕ್ಷಗಾನ, ಜಾತ್ರೆ ಎಂದಿನಂತೆ: ಕ್ರಿಸ್‌ಮಸ್ ಆಚರಣೆಗೂ ಅಡ್ಡಿ ಇಲ್ಲ: ಮಂಗಳೂರು: ದಿಢೀರ್ ರಾತ್ರಿ ಕರ್ಫ್ಯೂ ಘೋಷಣೆಯಿಂದ ಗೊಂದಲಕ್ಕೀಡಾದ ಕರಾವಳಿಯ ಜನತೆಗೆ ಕರ್ಫ್ಯೂ ರದ್ದು ಮಾಡಿರುವುದು ನಿರಾಳತೆ ತಂದಿದೆ.
ಒಂದೆಡೆ ಕರಾವಳಿಯಲ್ಲಿ ವರ್ಷಾಂತ್ಯ ಹಾಗೂ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ವಾಣಿಜ್ಯ ಚಟುವಟಿಕೆಗಳು ಗರಿಗೆದರುತ್ತಿರುವಾಗಲೇ ಈ ರೀತಿಯ ನಿಯಂತ್ರಣ ಬೇಕಿರಲಿಲ್ಲ ಎಂಬ ಅಭಿಪ್ರಾಯ ಬುಧವಾರವೇ ವ್ಯಕ್ತವಾಗಿತ್ತು. ಯಕ್ಷಗಾನ, ನಾಟಕ, ಜಾತ್ರೆ, ದೈವಾರಾಧನೆಯಂತಹ ಚಟುವಟಿಕೆಗಳು ತಡರಾತ್ರಿವರೆಗೂ ನಡೆಯುವುದರಿಂದ ಅದರ ಮೇಲೆ ಮತ್ತೆ ನಿಯಂತ್ರಣ ಯಾಕೆ ಎಂಬ ಮಾತುಗಳು ಕೇಳಿಬಂದಿದ್ದವು.
ಸರ್ಕಾರದ ಏಕಾಏಕಿ ನಿರ್ಧಾರದಿಂದ ಕಟೀಲು ಸಹಿತ ಹಲವು ಮೇಳಗಳು ತಮ್ಮ ಯಕ್ಷಗಾನ ಪ್ರದರ್ಶನದ ಸಮಯ ಬದಲಾಯಿಸಿ ಕಾಲಮಿತಿಗೆ ಒಳಪಟ್ಟಿದ್ದವು. ಗುರುವಾರ ಮತ್ತೆ ಸರ್ಕಾರ ತನ್ನ ನಿರ್ಧಾರ ರದ್ದುಪಡಿಸಿದ್ದರಿಂದ ಎಲ್ಲ ಯಕ್ಷಗಾನ ಪ್ರದರ್ಶನಗಳು ಎಂದಿನಂತೆ ನಡೆಯಲಿವೆ ಎಂದು ಅಧಿಕೃತವಾಗಿ ಮೇಳಗಳು ತಿಳಿಸಿವೆ.
ಇನ್ನೊಂದೆಡೆ ಕ್ರಿಸ್‌ಮಸ್ ಆಚರಣೆಗೆ ಸರ್ಕಾರ ಯಾಕೆ ಅಡ್ಡಿ ಮಾಡುತ್ತಿದೆ ಎಂದು ಸಮುದಾಯದಲ್ಲಿ ಅಪಸ್ವರ ಎದ್ದಿತ್ತು, ಅದೂ ಈಗ ದೂರವಾಗಿದ್ದು ಕರಾವಳಿಯ ಕ್ರೈಸ್ತ ಸಮುದಾಯ ಸಂಭ್ರಮದ ಆಚರಣೆಗೆ ಮುಂದಾಗಿದೆ.
ಬ್ರಿಟನ್‌ನಿಂದ ಬಂದವರು ಸೇಫ್: ದ.ಕ ಜಿಲ್ಲೆಗೆ ಇದುವರೆಗೆ ಬ್ರಿಟನ್‌ನಿಂದ ಮರಳಿ ಬಂದಿದ್ದ ಎಲ್ಲ 66 ಮಂದಿಯ ಕರೊನಾ ಆರ್‌ಟಿ-ಪಿಸಿಆರ್ ಟೆಸ್ಟ್ ವರದಿ ನೆಗೆಟಿವ್ ಬಂದಿದ್ದು, ಆತಂಕ ಮರೆಯಾಗಿದೆ.
ಇನ್ನೂ 8 ಮಂದಿ ಬಂದಿರುವ ಹಿನ್ನೆಲೆಯಲ್ಲಿ ಅವರ ಟೆಸ್ಟ್ ಗುರುವಾರ ನಡೆಸಲಾಗಿದೆ, ಅದರ ವರದಿ ಇನ್ನಷ್ಟೇ ಬರಬೇಕಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ತಿಳಿಸಿದ್ದಾರೆ.
ಸಕ್ರಿಯ ಪ್ರಕರಣ ಮತ್ತಷ್ಟು ಇಳಿಕೆ: ಗುರುವಾರದ ವರದಿಯಂತೆ ದ.ಕ. ಜಿಲ್ಲೆಯಲ್ಲಿ ಯಾವುದೇ ಕೋವಿಡ್ ಸಾವು ಸಂಭವಿಸಿಲ್ಲ, 20 ಮಂದಿಯಷ್ಟೇ ಕೋವಿಡ್ ಸೋಂಕಿಗೊಳಗಾಗಿದ್ದಾರೆ. ಈ ಮೂಲಕ ಸಕ್ರಿಯ ಪ್ರಕರಣಗಳು 408ಕ್ಕೆ ಇಳಿಕೆಯಾಗಿವೆ. ಗುರುವಾರ 27 ಮಂದಿ ಡಿಸ್‌ಚಾರ್ಜ್ ಆಗಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಗುರುವಾರ 6 ಮಂದಿಗೆ ಕೋವಿಡ್ ದೃಢಪಟ್ಟಿದೆ. 7 ಮಂದಿ ಗುಣಮುಖರಾಗಿದ್ದಾರೆ. ಸದ್ಯ 74 ಸಕ್ರಿಯ ಪ್ರಕರಣಗಳಿವೆ.
ಸೌದಿಗೆ ವಿಮಾನ ಸ್ಥಗಿತ: ಮಂಗಳೂರು: ಬ್ರಿಟನ್‌ನಲ್ಲಿ ಕೋವಿಡ್ ನಿಯಂತ್ರಣ ಮೀರಿ ವ್ಯಾಪಿಸುತ್ತಿರುವ ಕಾರಣ ಸೌದಿ ಅರೇಬಿಯಾ ಎಲ್ಲ ಅಂತಾರಾಷ್ಟ್ರೀಯ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಿದೆ. ಕನಿಷ್ಠ ಒಂದು ವಾರದ ತನಕ ರಸ್ತೆ ಹಾಗೂ ಸಮುದ್ರ ಮೂಲಕ ದೇಶ ಪ್ರವೇಶಕ್ಕೆ ನಿರ್ಬಂಧ ಹೇರಿದೆ.
ಭಾರತದಿಂದ ಸೌದಿ ಅರೇಬಿಯಾಕ್ಕೆ ವಿಮಾನ ತಿಂಗಳ ಹಿಂದಿನಿಂದಲೇ ಸ್ಥಗಿತವಾಗಿದ್ದರೂ ಭಾರತದಿಂದ ಉದ್ಯೋಗ ವಿಸಾ ಹೊಂದಿರುವವರು ಯುಎಇಗೆ ವಿಸಿಟ್ ಮೂಲಕ ಬಂದು ಯುಎಇಯಲ್ಲಿ 14 ದಿನ ಕ್ವಾರಂಟೈನ್ ಇದ್ದು ಬಳಿಕ ತೆರಳುತ್ತಿದ್ದರು. ಈ ಕುರಿತು ಮಾತನಾಡಿದ ಕನ್ನಡಿಗಾಸ್ ಫೆಡರೇಷನ್ ಸಂಚಾಲಕ ಹಿದಾಯತ್ ಅಡ್ಡೂರ್, ಯುಎಇಯಲ್ಲಿ ಹಲವಾರು ಕನ್ನಡಿಗರು ಬಂದು ಸೌದಿಗೆ ಪ್ರಯಾಣಿಸಲಾಗದೆ ಇಲ್ಲೇ ಹೊಟೇಲಿನಲ್ಲಿ ಉಳಿಯಬೇಕಾದ ಅನಿವಾರ್ಯತೆ ಬಂದಿದೆ. ಯುಎಇ ಅಥವಾ ಬೇರೆ ಯಾವುದೇ ದೇಶದ ಮೂಲಕ ಸೌದಿಗೆ ಪ್ರಯಾಣಿಸುವವರೂ ತಾತ್ಕಾಲಿಕವಾಗಿ ತಮ್ಮ ಪ್ರಯಾಣವನ್ನು ಮುಂದೂಡುವಂತೆ ತಿಳಿಸಿದ್ದಾರೆ.