

ಮೈಸೂರು: ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಮೈಸೂರು ಹಾಗೂ ಚಾಮರಾಜನಗರ ಭಾಗದ ಕಬ್ಬು ಬೆಳೆಗಾರರೊಂದಿಗೆ ಶನಿವಾರ ಸಭೆ ನಡೆಸಿ ಸಮಸ್ಯೆ ಆಲಿಸಿ, ಅಹವಾಲು ಸ್ವೀಕರಿಸಿದರು.
ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಸಚಿವರು, ರೈತರ ಸಮಸ್ಯೆಗಳನ್ನು ಬಗೆಹರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಅದರಂತೆ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಸಭೆಯಲ್ಲಿ ತಿಳಿಸಿರುವ ಬೇಡಿಕೆಗಳಿಗೆ ಪ್ರಮಾಣಿಕವಾಗಿ ಸ್ಪಂದಿಸುವ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದರು.
ಕೆ.ಆರ್.ನಗರದ ಶ್ರೀರಾಮ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವ ಕುರಿತು ಮಾತುಕತೆ ನಡೆದಿದೆ. ಸರ್ಕಾರ ಹಾಗೂ ಕಂಪನಿ ನಡುವೆ ಒಡಂಬಡಿಕೆಯಾಗಿರುವುದು ಕಾರ್ಖಾನೆ ಪ್ರಾರಂಭಿಸಿ ಕಬ್ಬು ಬೆಳೆಯುವ ರೈತರಿಗೆ ಅನುಕೂಲ ಮಾಡಿಕೊಡಬೇಕಿದೆ. ಅದರಂತೆ ಕಾರ್ಖಾನೆ ಪ್ರಾರಂಭಿಸುವ ಬಗ್ಗೆ ಸಂಬಂಧಿಸಿದವರೊಟ್ಟಿಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಅಚ್ಚುಕಟ್ಟು ಪ್ರದೇಶದಲ್ಲಿರುವ ಎಲ್ಲ ರೈತರ ಜಮೀನಿಗೆ ನೀರು ತಲುಪಿಸಲು ನೀರಾವರಿ ಯೋಜನೆ ರೂಪಿಸಲಾಗಿದೆ. ಈ ನಡುವೆ ನಾಲೆಗಳಿಂದ ಮೋಟಾರ್ ಮೂಲಕ ನೀರು ಪಡೆಯುವವರ ಮೇಲೆ ಕ್ರಮ ಜರುಗಿಸಲಾಗುತ್ತಿರುವ ಬಗ್ಗೆ ದೂರು ಬರುತ್ತಿದ್ದು, ಇದರ ಮಾರ್ಪಾಡಿಗೆ ರೈತರು ನೀಡುವ ಸಲಹೆಗಳನ್ನು ಸರ್ಕಾರ ಪರಿಗಣಿಸಲಿದೆ ಎಂದು ತಿಳಿಸಿದರು.
ಬ್ಯಾಂಕುಗಳಲ್ಲಿ ರೈತರಿಗೆ ಅಸಹಕಾರ ನೀಡುತ್ತಿದ್ದಾರೆ ಎಂಬ ರೈತರ ಮಾತಿಗೆ ಪ್ರತಿಕ್ರಿಯಿಸಿದ ಸಚಿವರು, ಶೀಘ್ರದಲ್ಲೇ ಬ್ಯಾಂಕ್ ಅಧಿಕಾರಿಗಳನ್ನು ಸಭೆ ಕರೆದು ಚರ್ಚಿಸಿ ರೈತರನ್ನು ಶೋಷಣೆ ಮಾಡದಂತೆ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ರೈತರು ತಾವು ಬೆಳೆದ ಬೆಳೆ ಸಾಗಿಸಲು ಅನುಕೂಲವಾಗುವ ‘ನಮ್ಮ ಹೊಲ, ನಮ್ಮ ರಸ್ತೆಯನ್ನು’ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ಜನರು ಕೂಡ ಪ್ರಜಾಪ್ರಭುತ್ವದ ಪ್ರಮುಖ ವೇದಿಕೆಯಾದ ಗ್ರಾಮಸಭೆಗಳಲ್ಲಿ ಭಾಗವಹಿಸಿ ಗ್ರಾಮಕ್ಕೆ ಅಗತ್ಯವಿರುವ ಮೂಲಸೌಕರ್ಯದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ರೈತ ಮುಖಂಡ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಕಳೆದ ಸಾಲಿನಲ್ಲಿ ರೈತರಿಗೆ ಸಕ್ಕರೆ ಕಾರ್ಖಾನೆಯವರು ನೀಡಬೇಕಾಗಿರುವ 150 ರೂ. ಬಾಕಿ ಅನ್ನು ತಕ್ಷಣ ಕೊಡಿಸಬೇಕು, ಸಕ್ಕರೆ ಕಾರ್ಖಾನೆ ಮುಂಭಾಗ ತೂಕದ ಯಂತ್ರವನ್ನು ಎಪಿಎಂಸಿ ಮುಖಾಂತರ ಅಳವಡಿಸಬೇಕು, ಕಬ್ಬು ಕಟಾವು ಸಾಗಾಣೆ ಕೂಲಿಯನ್ನು ಬಣ್ಣಾರಿ ಸಕ್ಕರೆ ಕಾರ್ಖಾನೆಯು ಮನಬಂದಂತೆ ನಿರ್ವಹಿಸುತ್ತಿದೆ. ಉತ್ತರ ದಕ್ಷಿಣ ಎಂಬ ಭೇದಭಾವವಿಲ್ಲದೆ ಉತ್ತರ ಕರ್ನಾಟಕದಲ್ಲಿರುವ ರೀತಿ ಕಟಾವು ಸಾಗಣೆ ವೆಚ್ಚವನ್ನು ಎಲ್ಲ ಕಾರ್ಖಾನೆಗೂ ಅನ್ವಯವಾಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ದ್ವಿಪಕ್ಷೀಯ ಒಪ್ಪಂದ ಪತ್ರವನ್ನು ತಕ್ಷಣ ಜಾರಿಗೆ ತರಬೇಕು, ಪ್ರಸಕ್ತ ಸಾಲಿಗೆ ಪ್ರತಿ ಟನ್ ಕಬ್ಬಿಗೆ 4000 ರೂ.ನಿಗದಿ ಪಡಿಸಬೇಕು, ಕಾರ್ಖಾನೆಯಿಂದ ಇಳುವರಿಯಲ್ಲಿ ಮೋಸವಾಗುವುದನ್ನು ತಪ್ಪಿಸಲು ಸ್ಥಳೀಯ ರೈತರ ಜತೆಗೂಡಿ ತಜ್ಞರ ಸಮಿತಿ ರಚನೆ ಆಗಬೇಕು, ಕಬಿನಿ ಅಚ್ಚು ಕಟ್ಟು ಭಾಗದ ನಾಲೆಗಳಿಗೆ ಯಾವುದೇ ಶರತ್ತುಗಳಿಲ್ಲದೆ ಕೃಷಿಗೆ ನಿರಂತರವಾಗಿ ನೀರನ್ನು ಹರಿಸಬೇಕು ಎಂದು ಕೋರಿದರು.
ಕೃಷಿಗೆ ನಾಲೆಗಳಿಂದ ಮೋಟಾರ್ ಅಳವಡಿಸಿ ನೀರು ಪಡೆಯುವುದನ್ನು ಕಾನೂನು ಬಾಹಿರ ಎನ್ನುವ ಆದೇಶವನ್ನು ತಕ್ಷಣ ವಾಪಸ್ ಪಡೆಯಬೇಕು, ಪಂಪ್‌ಸೆಟ್‌ಗಳ ಅಕ್ರಮ-ಸಕ್ರಮ ಯೋಜನೆಯನ್ನು ಮರುಜಾರಿ ಮಾಡಬೇಕು, ಹಾಲು ಉತ್ಪಾದಕರಿಗೆ ನೀಡಬೇಕಾಗಿರುವ 800 ಕೋಟಿ ರೂ. ಹಾಲು ಪ್ರೋತ್ಸಾಹಧನವನ್ನು ತಕ್ಷಣ ಸರ್ಕಾರ ಬಿಡುಗಡೆ ಮಾಡಬೇಕು, ಕೆರೆಗಳಿಗೆ ನೀರು ತುಂಬಿಸಬೇಕು ಎನ್ನುವ ಬೇಡಿಕೆ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಮನವಿ ಮಾಡಿದರು.
ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ, ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಿಷ್ಣುವರ್ಧನ್, ಮುಖಂಡರಾದ ರಾಜಣ್ಣ, ತಿಮ್ಮಪ್ಪ, ಮಲೆಯೂರು ಹರ್ಷ, ಹತ್ತಹಳ್ಳಿ ಸ್ವಾಮೀರಾಜ್, ನಾಗರಾಜ್ ಹಾಡ್ಯ ರವಿ ಮುದ್ದಾಹಳ್ಳಿ ಚಿಕ್ಕ ಸ್ವಾಮಿ, ರೇವಣ್ಣ, ಮಲಿಯೂರು ಮಹೇಂದ್ರ, ಪ್ರವೀಣ್, ಅಂಬಳೆ ಮಹದೇವಸ್ವಾಮಿ, ಅರಳಿಕಟ್ಟೆ ಕುಮಾರ್, ಸಜ್ಜಲೂರು ಜಯಸ್ವಾಮಿ, ದೇವೇಂದ್ರಪ್ಪ, ಶಿವರುದ್ರಪ್ಪ, ಹೊಸಪುರ ಮಾದಪ್ಪ ಒಳಗೆರೆ ಗಣೇಶ್ ನಂದಿಗುಂದಪುರ ಸೋಮಣ್ಣ ಇತರರು ಇದ್ದರು.