

ಶಿವಮೊಗ್ಗ: ಇಡೀ ಮಲೆನಾಡು ಪ್ರದೇಶಕ್ಕೆ ಆರೋಗ್ಯ ಸೇವೆ ಸಲ್ಲಿಸುವ ಪ್ರಮುಖ ಕೇಂದ್ರವನ್ನಾಗಿ ಶಿವಮೊಗ್ಗವನ್ನು ಅಭಿವೃದ್ಧಪಡಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್ ಹೇಳಿದರು.
ಬೆಂಗಳೂರಿನ ವಿಕಾಸ ಸೌಧದಲ್ಲಿ ಬುಧವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಸಿಮ್ಸ್ (ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ) ಮತ್ತು ಮೆಗ್ಗಾನ್ ಆಸ್ಪತ್ರೆಯಲ್ಲಿ ಮೂಲಸೌಕರ್ಯ ಮತ್ತು ಸೇವಾ ಸಾಮರ್ಥ್ಯ ಹೆಚ್ಚಿಸುವ ಕುರಿತು ಪರಿಶೀಲನೆ ನಡೆಸಿದರು.
ಶಿವಮೊಗ್ಗ ಜಿಲ್ಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರ ಸಂಪೂರ್ಣ ಆರೋಗ್ಯ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ವೈದ್ಯಕೀಯ ಕಾಲೇಜುಗಳು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳೂ ಸೇರಿದಂತೆ ವೈದ್ಯಕೀಯ ಸಂಸ್ಥೆಗಳ ಸಮೂಹವನ್ನು ಸಿಮ್ಸ್ ಒಳಗೊಂಡಿದೆ. ಅತ್ಯುತ್ತಮ ರಸ್ತೆ, ರೈಲು ಮತ್ತು ವಾಯು ಸಂಪರ್ಕವನ್ನು ಹೊಂದಿರುವುದರಿಂದ ಶಿವಮೊಗ್ಗ ನಗರವು ಮಲೆನಾಡು ಪ್ರದೇಶಕ್ಕೆ ಆರೋಗ್ಯ ಕೇಂದ್ರವಾಗಲಿದೆ ಎಂದು ಸಚಿವರು ವಿವರಿಸಿದರು.
ಕಲಬುರಗಿಯನ್ನು ಕಲ್ಯಾಣ ಕರ್ನಾಟಕ ಪ್ರದೇಶದ ಆರೋಗ್ಯ ಕೇಂದ್ರವಾಗಿ ಅಭಿವೃದ್ಧಿಪಡಿಸಿದಂತೆಯೇ ಶಿವಮೊಗ್ಗವು ಮಲೆನಾಡು ಪ್ರದೇಶದ ವೈದ್ಯಕೀಯ ಸೇವಾ ವಲಯವಾಗಿ ಕಾರ್ಯನಿರ್ವಹಿಸಲಿದೆ. ಸಿಮ್ಸ್ ಬೋಧನಾ ಆಸ್ಪತ್ರೆಯಾಗಿರುವ ಮೆಗ್ಗಾನ್ ಪ್ರಸ್ತುತ ಕಿಕ್ಕಿರಿದು ತುಂಬುತ್ತಿದೆ. ವೈದ್ಯರು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಹೊರೆಯನ್ನು ಕಡಿಮೆ ಮಾಡಲು ಮತ್ತು ಈ ಪ್ರದೇಶದಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಸುಧಾರಿಸಲು ಹೊಸ ಸ್ಪೆಷಾಲಿಟಿ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸಲು ಹೆಚ್ಚು ಹೂಡಿಕೆ ಮಾಡಲಾಗುವುದು ಎಂದು ಹೇಳಿದರು.
ಶಿವಮೊಗ್ಗ ಜಿಲ್ಲೆ ಏಳು ತಾಲೂಕುಗಳನ್ನು ಹೊಂದಿದೆ. ಆದರೆ ಇಲ್ಲಿಗೆ ನೆರೆಹೊರೆಯ 26 ತಾಲೂಕುಗಳಿಂದಲೂ ರೋಗಿಗಳು ಬರುತ್ತಾರೆ. ಇದರಿಂದ ಹೊರೆ ಹೆಚ್ಚಿದೆ. ಈ ಒತ್ತಡ ಕಡಿಮೆ ಮಾಡಲು ಮತ್ತು ಗುಣಮಟ್ಟದ ಚಿಕಿತ್ಸೆ ನೀಡಲು ಸುಧಾರಿತ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸುವುದು ಅವಶ್ಯ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು. ಆಸ್ಪತ್ರೆಗೆ ಹೆಚ್ಚುವರಿ ಎಂಆರ್‌ಐ ಯಂತ್ರ ಮತ್ತು ಆಂಬುಲೆನ್ಸ್ ಖರೀದಿಸಲು ಈ ಸಂದರ್ಭದಲ್ಲಿ ಅನುಮೋದನೆ ನೀಡಲಾಯಿತು.
ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಿಸಿನ್, ನಿರ್ದೇಶಕಿ ಡಾ. ಬಿ.ಎಲ್.ಸುಜಾತಾ ರಾಥೋಡ್, ಸಿಮ್ಸ್ ನಿರ್ದೇಶಕ ಡಾ. ವಿರೂಪಾಕ್ಷಪ್ಪ, ವೈದ್ಯಕೀಯ ಅಧೀಕ್ಷಕ ಡಾ. ತಿಮ್ಮಪ್ಪ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.