

ಹುಬ್ಬಳ್ಳಿ: ಬಿಜೆಪಿ ಕಾರ್ಯಕರ್ತರಿಗೆ ಅನಗತ್ಯ ತೊಂದರೆ ಕೊಡುತ್ತಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ಎನ್.ಸಿ. ಕಾಡದೇವರ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಭಾನುವಾರ ಕೆಂಡಾಮಂಡಲವಾದ ಘಟನೆ ನಗರದ ಜೋಶಿ ಅವರ ನಿವಾಸದಲ್ಲಿ ನಡೆಯಿತು.
ಧಾರವಾಡದ ಗೊಲ್ಲರ ಓಣಿ ನಿವಾಸಿ ರವಿ ಗೊಲ್ಲರ ಎಂಬ ಬಿಜೆಪಿ ಕಾರ್ಯಕರ್ತನನ್ನು ಠಾಣೆಗೆ ಕರೆಯಿಸಿ ಹಿಗ್ಗಾಮುಗ್ಗಾ ಥಳಿಸಿದ್ದರು. ಧಾರವಾಡದಿಂದ ಆಗಮಿಸಿದ್ದ ಬಿಜೆಪಿ ಕಾರ್ಯಕರ್ತರು ಈ ಕುರಿತು ಜೋಶಿ ಅವರ ಮುಂದೆ ದೂರಿತ್ತಿದ್ದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂತ ತಕ್ಷಣ ಕೆಲವರ ಮಾತು ಕೇಳಿಕೊಂಡು ನಮ್ಮ ಕಾರ್ಯಕರ್ತರನ್ನು ಥಳಿಸುವುದು ಸರಿಯಲ್ಲ. ಸಲ್ಲದ ಆರೋಪಗಳನ್ನು ಹೊರಿಸಿ ಠಾಣೆಗೆ ಕರೆಯಿಸಿ ಥಳಿಸಿದ್ದು ಏಕೆ? ಎಂದು ಧಾರವಾಡ ಶಹರ ಠಾಣೆ ಇನ್‌ಸ್ಪೆಕ್ಟರ್ ಕಾಡದೇವರ ಅವರನ್ನು ಸಚಿವರು ಮನೆಗೆ ಕರೆಯಿಸಿ ತರಾಟೆಗೆ ತೆಗೆದುಕೊಂಡರು. ಅನವಶ್ಯಕವಾಗಿ ಬಿಜೆಪಿ ಕಾರ್ಯಕರ್ತರಿಗೆ ತೊಂದರೆ ಕೊಡಬೇಡಿ ಎಂದು ಸಚಿವರು, ಇನ್‌ಸ್ಪೆಕ್ಟರ್‌ಗೆ ಖಡಕ್ ವಾರ್ನಿಂಗ್ ನೀಡಿದರು. ನಿಮ್ಮ ಸ್ವೀಟೂ ಬೇಡ ಏನೂ ಬೇಡ, ನಿಮ್ಮ ಆಯುಕ್ತರಿಗೆ ಡಿಜಿಗೂ ಈ ಬಗ್ಗೆ ಹೇಳುತ್ತೇನೆ ಎಂದು ಇನ್‌ಸ್ಪೆಕ್ಟರ್‌ಗೆ ಗದರಿದರು.