

ಹರಿಹರ: ಸಂವಿಧಾನದಿಂದ ದೇಶದ ಜನಸಾಮಾನ್ಯರು ಸ್ವಾಭಿಮಾನದ ಬದುಕು ಕಾಣಲು ಸಾಧ್ಯವಾಗಿದೆ ಎಂದು ವಕ್ಪ್ ಮತ್ತು ವಸತಿ ಸಚಿವ ಬಿ.ಝುಡ್. ಜಮೀರ್ ಅಹ್ಮದ್ ಖಾನ್ ಹೇಳಿದರು.
ನಗರದ ಅಂಜುಮನ್ ಶಾಲೆಯ ಆವರಣದಲ್ಲಿ ಭಾನುವಾರ ವಕ್ಪ್ ಮಂಡಳಿಯಿಂದ ನೀಡಿದ ಹೈಟೆಕ್ ಐಸಿಯು ಆಂಬುಲೆನ್ಸ್ ಮತ್ತು ಮೋಕ್ಷವಾಹಿನಿ (ಆಖರಿ ಸಫರ್) ವಾಹನಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ದಲಿತ ಸಮುದಾಯದಲ್ಲಿ ಹುಟ್ಟಿ ಅಸ್ಪೃಶ್ಯತೆಯ ಕರಾಳತೆಯನ್ನು ಸ್ವತಃ ಅನುಭವಿಸಿದ ಡಾ. ಅಂಬೇಡ್ಕರ್ ಅವರು ಸಂವಿಧಾನ ರಚಿಸಿದ್ದರಿಂದಲೇ ಈ ದೇಶ ನೆಮ್ಮದಿಯ ಜೀವನ ನಡೆಸುತ್ತಿದೆ. ನಾವೆಲ್ಲರೂ ಬಾಬೂಜಿ ಅವರನ್ನು ಸದಾ ಸ್ಮರಿಸಬೇಕು ಎಂದರು.
ವಕ್ಪ್ ಮಂಡಳಿಯಿಂದ ಜಿಲ್ಲೆಗೊಂದು, ಹರಿಹರಕ್ಕೆ ಹೆಚ್ಚುವರಿಯಾಗಿ ಹೈಟೆಕ್ ಐಸಿಯು ಆಂಬುಲೆನ್ಸ್ ಮಂಜೂರು ಮಾಡಲಾಗಿದೆ. ಈ ವಾಹನವನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಖಾಜಿ ಸೈಯದ್ ಶಂಷುದ್ದೀನ್ ಮೌಲಾನಾ, ಜಿಲ್ಲಾ ವಕ್ಪ್ ಸಲಹಾ ಸಮಿತಿ ಅಧ್ಯಕ್ಷ ಸಿರಾಜ್ ಅಹ್ಮದ್, ಅಂಜುಮನ್ ಸಂಸ್ಥೆ ಅಧ್ಯಕ್ಷ ಸೈಯದ್ ಏಜಾಜ್, ಸಂಸ್ಥೆಯ ಕಾರ್ಯದರ್ಶಿ ಆಸಿಫ್ ಜುನೈದಿ ಹಾಗೂ ಸಂಸ್ಥೆಯ ಪದಾಧಿಕಾರಿಗಳು, ನಗರಸಭಾ ಸದಸ್ಯರಿದ್ದರು.