ಸಚಿವ ಜಮೀರ್ ಅಹ್ಮದ್ ಆಪ್ತರಿಂದ ಎಚ್.ಡಿ. ಕೋಟೆಯಲ್ಲಿ ಅಕ್ರಮ ರೆಸಾರ್ಟ್ ನಿರ್ಮಾಣ : ಬಿಜೆಪಿ ಗಂಭೀರ ಆರೋಪ

zameer ahmed
Published on

ಮೈಸೂರು: ವಸತಿ ಸಚಿವ ಜಮೀರ್ ಅಹಮದ್ ಆಪ್ತರು ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ ಎಚ್.ಡಿ. ಕೋಟೆ ಅಂತರಸಂತೆಯಲ್ಲಿ ಅಕ್ರಮವಾಗಿ ರೆಸಾರ್ಟ್ ನಿರ್ಮಿಸಿದ್ದಾರೆ ಎಂದು ಬಿಜಪೆಇ ನಗರ ವಕ್ತಾರ ಮೋಹನ್ ಆರೋಪಿಸಿದ್ದಾರೆ.

ಎಚ್.ಡಿ. ಕೋಟೆ ತಾಲೂಕಿನ ಪರಿಸರ ಸೂಕ್ಷ್ಮ ವಲಯದಲ್ಲಿ ಅಕ್ರಮವಾಗಿ 10ಕ್ಕೂ ಹೆಚ್ಚು ರೆಸಾರ್ಟ್‌ಗಳು, ಹೋಂ ಸ್ಟೇಗಳನ್ನು ನಿರ್ಮಾಣ ಮಾಡಲಾಗಿದೆ. ಇದರಲ್ಲಿ ವಸತಿ ಸಚಿವ ಜಮೀರ್ ಅವರ ಆಪ್ತರ ರೆಸಾರ್ಟ್ ಕೂಡ ಸೇರಿದೆ. ಜಮೀರ್ ಅಹಮದ್ ಅವರ ಪಿಎ ಸರ್ಫರಾಜ್ ಮತ್ತು ಅವರ ಆಪ್ತರ ಹೆಸರಿನಲ್ಲಿ ರೆಸಾರ್ಟ್ ನಿರ್ಮಾಣ ಮಾಡಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಎಚ್.ಡಿ. ಕೋಟೆ 4 ಡ್ಯಾಂಗಳನ್ನು ಹೊಂದಿರುವ ತಾಲೂಕು. ಜೀವವೈವಿಧ್ಯತೆಯಿಂದ ಕೂಡಿರುವ ಪರಿಸರ ಸೂಕ್ಷ್ಮ, ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾಗಿದೆ. ಬಂಡಿಪುರ ಮತ್ತು ನಾಗರಹೊಳೆ ಒಂದುಗೂಡುವ ಪ್ರದೇಶವೂ ಹೌದು. ಇಂತಹ ಪ್ರದೇಶದಲ್ಲಿ ತಲೆ ಎತ್ತುತ್ತಿರುವ ರೆಸಾರ್ಟ್‌ಗಳಿಗೆ ಕಡಿವಾಣ ಹಾಕುವ ಅವಶ್ಯಕತೆ ಇದೆ ಎಂದರು.

ಡಿ ದರ್ಜೆ ಗುಮಾಸ್ತ ಸರ್ಫರಾಜ್ ಕಳೆದ 25 ವರ್ಷದಿಂದ ಜಮೀರ್ ಜತೆ ಇದ್ದಾರೆ. ಅರಣ್ಯ ಇಲಾಖೆ ನೀತಿ ನಿಯಮಗಳನ್ನು ಗಾಳಿಗೆ ತೂರಿ ರೆಸಾರ್ಟ್ ನಿರ್ಮಾಣ ಮಾಡಿದ್ದಾರೆ. ಸರ್ಫರಾಜ್ ಸರ್ಕಾರಿ ನೌಕರನಾಗಿ ವಹಿವಾಟು ನಡೆಸುತ್ತಿದ್ದಾರೆ. ಒಬ್ಬ ಡಿ ಗ್ರೂಪ್ ನೌಕರ ಕೋಟ್ಯಾಂತರ ರೂಪಾಯಿ ಬಂಡವಾಳ ಹೂಡಿ ರೆಸಾರ್ಟ್ ಮಾಡಲು ಹೇಗೆ ಸಾಧ್ಯ? ಇದರ ಹಿಂದೆ ಜಮೀರ್ ಅಹಮದ್ ಇದ್ದಾರೆ ಎಂದು ಆರೋಪಿಸಿದರು.

2015ರ ಟೂರಿಸಂ ಪಾಲಿಸಿ ಪ್ರಕಾರ ಅತಿಥಿ ಸ್ಕೀಮ್‌ನಲ್ಲಿ ಹೋಂಸ್ಟೇ ಮಾಡಲು ರೈತರಿಗೆ ಅವಕಾಶ ಇದೆ. ಆದರೆ, ರೈತ ಆ ಭಾಗದವರಾಗಿರಬೇಕು. ವಾಸದ ಮನೆ ಜತೆಗೆ 4 ಹೆಚ್ಚುವರಿ ಕೊಠಡಿ ಮಾಡಿ ಆ ರೈತನೇ ಅದನ್ನು ಮೆಂಟೇನ್ ಮಾಡಬೇಕು ಎಂಬ ನಿಯಮ ಇದೆ. ಆದರೆ ರೆಸಾರ್ಟ್‌ನಲ್ಲಿ 20ಕ್ಕೂ ಹೆಚ್ಚು ರೂಮ್ ಇವೆ. ಸರ್ಫರಾಜ್ ಕಾರ್ಯ ಸ್ಥಾನ ಬೆಂಗಳೂರು. ಇಲ್ಲಿ ಹೇಗೆ ಮೆಂಟೇನ್ ಮಾಡಲು ಸಾಧ್ಯ? ಒಬ್ಬ ಅತಿಥಿಗೆ 25 ಸಾವಿರ ಚಾರ್ಜ್ ಮಾಡುತ್ತಾರೆ. ಆ ರೆಸಾರ್ಟ್ ಪಕ್ಕದಲ್ಲೇ ಸರ್ಫರಾಜ್ ಪರ್ಸನಲ್ ಡ್ರೈವರ್ 4 ಎಕೆರೆ ಜಾಗದಲ್ಲಿ 100 ಕೋಟಿ ಇನ್ವೆಸ್ಟ್ ಮಾಡಿ ದೊಡ್ಡ ಬಿಲ್ಡಿಂಗ್ ಕಟ್ಟುತಿದ್ದಾರೆ. ಒಬ್ಬ ಡ್ರೈವರ್ ಈ ಪ್ರಮಾಣದ ಬಂಡವಾಳ ಹೂಡಿಕೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಸಚಿವ ಸತೀಶ್ ಜಾರಕಿಹೊಳಿ ಅವರು ತಮ್ಮ ಸಂಬಂಧಿಕರ ಹೆಸರಿನಲ್ಲಿ ರೆಸಾರ್ಟ್ ಮಾಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಇದಕ್ಕೆ ಇದಕ್ಕೆ ಸಂಬಂಧಿಸಿದಂತೆ ಒಂದು ಸತ್ಯ ಶೋಧನೆ ಸಮಿತಿ ಮಾಡುತ್ತೇವೆ. ಈ ಬಗ್ಗೆ ನಮ್ಮ ರಾಜ್ಯ ನಾಯಕರ ಗಮನಕ್ಕೆ ತಂದಿದ್ದೇವೆ. ಮುಂದಿನ ದಿನಗಳಲ್ಲಿ ಅಕ್ರಮ ರೆಸಾರ್ಟ್ ಇರುವಲ್ಲಿಗೆ ಮಾಧ್ಯಮ ಪ್ರತಿನಿಧಿಗಳನ್ನ ಕರೆದುಕೊಂಡು ಹೋಗಿ ವಾಸ್ತವಾಂಶ ಪರಿಶೀಲನೆ ಮಾಡುತ್ತೇವೆ ಎಂದರು.

ಪರಿಸರ ಸೂಕ್ಷ್ಮ ವಲಯದಲ್ಲಿ ಹಾಗೂ ಕಬಿನಿ ಹಿನ್ನೀರು ಭಾಗದಲ್ಲಿ ಅಕ್ರಮವಾಗಿ ರೆಸಾರ್ಟ್ ನಿರ್ಮಾಣ ಮಾಡಿರುವ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದೇವೆ. ದಾಖಲೆ ಸಮೇತ ಲೋಕಾಯುಕ್ತ ಎಸ್.ಪಿ. ಉದೇಶ್‌ಗೆ ದೂರು ಕೊಟ್ಟಿದ್ದೇವೆ. ಆದರೆ, ಅಕ್ರಮ ಎಸಗಿರುವವರ ವಿರುದ್ಧ ಕ್ರಮ ಜರುಗಿಸಲು ಲೋಕಾಯುಕ್ತಕ್ಕೆ ತಾಕತ್ತು ಇಲ್ಲ. ಅಕ್ರಮ ರೆಸಾರ್ಟ್‌ಗಳಲ್ಲಿ ಸಚಿವ ಜಮೀರ್ ಅಹಮದ್ ಬಂಡವಾಳ ಹೂಡಿಕೆ ಇದೆ. ಸರ್ಕಾರದ ಹಣವನ್ನು ಇಲ್ಲಿಗೆ ತಂದು ಹಾಕುತ್ತಿದ್ದಾರೆ. ಇಷ್ಟೆಲ್ಲ ಅಕ್ರಮಗಳ ಬಗ್ಗೆ ಕೂಡಲೇ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ನಗರ ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net