ಸಚಿವರು ಬರ‌್ತಾರೆಂದು ರಸ್ತೆ ತಾತ್ಕಾಲಿಕ ದುರಸ್ತಿ

Kavital Road
ಕವಿತಾಳದಲ್ಲಿ ಮುಖ್ಯರಸ್ತೆ ದುರಸ್ತಿ ಕಾರ್ಯ ನಡೆದಿರುವುದು.
Published on

ಕವಿತಾಳ: ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಎರಡ್ಮೂರು ದಿನಗಳಲ್ಲಿ ಸಚಿವ ಎನ್.ಎಸ್.ಬೋಸರಾಜು ಭೇಟಿ ನೀಡುತ್ತಿರುವ ಪ್ರಯುಕ್ತ ಅಧಿಕಾರಿಗಳು ಪಟ್ಟಣದಲ್ಲಿ ಹದಗೆಟ್ಟಿರುವ ಮುಖ್ಯರಸ್ತೆಗೆ ತೇಪೆ ಕಾರ್ಯ ನಡೆಸುತ್ತಿದ್ದು, ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಆರು ತಿಂಗಳಿನಿಂದ ಮುಖ್ಯರಸ್ತೆ ಕಾಮಗಾರಿ ಸ್ಥಗಿತವಾಗಿತ್ತು. ಈಗ ಕುಂಟುತ್ತ ಸಾಗಿದೆ. ಹಿಂದೆ ಒಂದು ಕೋಟಿ ರೂ. ವೆಚ್ಚದಲ್ಲಿ ಆರು ವರ್ಷಗಳ ಹಿಂದೆ ರಸ್ತೆಗೆ ಡಿವೈಡರ್ ನಿರ್ಮಿಸಲಾಗಿತ್ತು. ನೂತನ ರಸ್ತೆ ನಿರ್ಮಾಣಕ್ಕಾಗಿ ಡಿವೈಡರ್ ತೆರವುಗೊಳಿಸಲಾಯಿತು.

ಹೈಸ್ಕೂಲ್ ಹತ್ತಿರ ಮಾತ್ರ ಹಾಗೆ ಬಿಟ್ಟಿದ್ದರಿಂದ ವಾಹನಗಳು ಅಪಘಾತಕ್ಕೀಡಾಗುತ್ತಿದ್ದು, ವಾಹನ ಸವಾರರು ಆಡಳಿತ ವರ್ಗದ ವಿರುದ್ಧ ಕಿಡಿಕಾರುತ್ತಿದ್ದಾರೆ. ನಿರಂತರ ಮಳೆಯಿಂದಾಗಿ ಮುಖ್ಯರಸ್ತೆಯಲ್ಲಿ ನೀರು ನಿಂತು ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ರಸ್ತೆ ಕಾಮಗಾರಿ ಬೇಗ ಮುಗಿಸದ ಕಾರಣ ಕೆಸರು ಮಯವಾಗಿದೆ.

ಅಲ್ಲದೆ ಹುಸೇನಪುರ ಕ್ರಾಸ್‌ನಿಂದ ಮಸ್ಕಿ ಕ್ರಾಸ್‌ವರೆಗೆ ಕೆಕೆಆರ್‌ಡಿಬಿ ಯೋಜನೆಯಡಿ 21 ಕೋಟಿ ರೂ.ವೆಚ್ಚದಲ್ಲಿ ಮೂರು ಕಿಮೀ ದ್ವಿಪಥ ರಸ್ತೆ ನಿರ್ಮಾಣ ಕೈಗೊಂಡಿದ್ದರೂ ಉಪಯುಕ್ತವಿಲ್ಲದಂತಾಗುತ್ತಿದೆ. ಇದೀಗ ಸಚಿವರು ಬರುತ್ತಾರೆಂಬ ಕಾರಣಕ್ಕೆ ತೇಪೆ ಕಾರ್ಯ ಆರಂಭಿಸಲಾಗಿದೆ. ಶುಕ್ರವಾರ ರಸ್ತೆಯಲ್ಲಿ ನಿರ್ಮಾಣವಾದ ಗುಂಡಿಗಳಿಗೆ ಕಂಕರ್ ಹಾಕುತ್ತಿರುವುದು ಕಂಡುಬಂತು.

ಮುಖ್ಯರಸ್ತೆ ಕಾಮಗಾರಿ ಗುಣಮಟ್ಟದಿಂದ ಮಾಡಿ ಅಪಘಾತ ಸಂಭವಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ಶೇಖರಪ್ಪ ಲಿಂಗಸುಗೂರು, ಭಿಮಣ್ಣ ಭೋವಿ, ಅಲ್ಲಮಪ್ರಭು, ಜಂಬಣ್ಣ ಇತರರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net