

| ಸುರೇಶ ಕಾಗಲಿ ಐನಾಪುರ
ಮೂರು ದಶಕಗಳ ನಂತರ ಕಾಗವಾಡ ಕ್ಷೇತ್ರಕ್ಕೆ ಸಚಿವ ಸ್ಥಾನ ದಕ್ಕಿದೆ. ಈ ಕ್ಷೇತ್ರದಲ್ಲಿ ಈವರೆಗೆ ಸಚಿವರಾಗಿದ್ದವರು ಹೊರಗಿನವರೇ. ಇದೇ ಮೊದಲ ಸಲ ಸ್ವಕ್ಷೇತ್ರ (ಕೆಂಪವಾಡ ಗ್ರಾಮ)ದವರಾದ ಶ್ರೀಮಂತ ಪಾಟೀಲ ಸಚಿವರಾಗಿರುವುದು ಸ್ಥಳೀಯರಲ್ಲಿ ಅಭಿವೃದ್ಧಿಗೆ ಸಂಬಂಧಿಸಿ ಹತ್ತು-ಹಲವು ನಿರೀಕ್ಷೆ ಹುಟ್ಟುಹಾಕಿದೆ.
2018ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದ ಶ್ರೀಮಂತ ಪಾಟೀಲ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 2019ರ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿರುವ ಅವರು, ಕಾಗವಾಡವನ್ನು ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸುವ ಸಂಕಲ್ಪ ತೊಟ್ಟಿದ್ದಾರೆ. ಹಾಗಾಗಿ, ಸಹಜವಾಗಿ ಕ್ಷೇತ್ರದ ಜನರಲ್ಲಿ ನಿರೀಕ್ಷೆಗಳು ಗರಿಗೆದರಿವೆ. ಮೂಲ ಸೌಲಭ್ಯ ಒದಗಿಸುತ್ತಾರೆ. ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರುತ್ತಾರೆ ಎಂದು ಕ್ಷೇತ್ರದ ಜನರು ಕಾದು ಕುಳಿತಿದ್ದಾರೆ.
ಶ್ರೀಮಂತ ಪಾಟೀಲ ಅವರ ಮುಂದೆ ಈಗ ಹತ್ತಾರು ಸವಾಲುಗಳಿವೆ. ಕ್ಷೇತ್ರ ವ್ಯಾಪ್ತಿಯ ಸಾವಿರಾರು ಎಕರೆ ಬರಡು ಭೂಮಿಗೆ ನೀರು ಹರಿಸಲು ಶ್ರೀ ಬಸವೇಶ್ವರ ಏತ ನೀರಾವರಿ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕಿದೆ. ನದಿಪಾತ್ರದ ಗ್ರಾಮಗಳಲ್ಲಿರುವ ಸಾವಿರಾರು ಎಕರೆ ಭೂಮಿ ಸವುಳು-ಜವುಳಿನಿಂದ ಬರಡಾಗಿದೆ. ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಅದನ್ನು ಫಲವತ್ತಾದ ಭೂಮಿಯಾಗಿ ಪರಿವರ್ತಿಸಬೇಕಿದೆ ಎಂದು ಎನ್ನುವುದು ಕ್ಷೇತ್ರದ ಜನರ ಬೇಡಿಕೆಯಾಗಿದೆ.
ಕ್ಷೇತ್ರದ ರಾಜಕೀಯ ಇತಿಹಾಸ: ಭಾರತಕ್ಕೆ ಸ್ವಾತಂತ್ರೃ ಸಿಕ್ಕ ನಂತರ, 1952ರಲ್ಲಿ ಮೊದಲ ಚುನಾವಣೆಗೆ ಕಾಗವಾಡ ಸಾಕ್ಷಿಯಾಗಿತ್ತು. ಆಗ, ಪಕ್ಷೇತರರಾಗಿ ಕಣಕ್ಕಿಳಿದಿದ್ದ ರಾಯಬಾಗದ ವಿ.ಎಲ್.ಪಾಟೀಲ ಆಯ್ಕೆಯಾಗಿದ್ದರು. 1957ರಲ್ಲೂ ಸಿಂಡಿಕೇಟ್-ಇಂಡಿಕೇಟ್ ಪಕ್ಷದಿಂದ ಅವರು ಮರು ಆಯ್ಕೆಯಾದರು. 1962ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಬೆಳಗಾವಿಯ ಚಂಪಾಬಾಯಿ ಭೋಗಲೆ ಗೆದ್ದರು. 1967ರಲ್ಲಿ ಕಾಗವಾಡ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟಿತು. ಆಗ, ಕಾಂಗ್ರೆಸ್‌ನ ಹುರಿಯಾಳು ಬೆಳಗಾವಿಯ ಚಂಪಾಬಾಯಿ ಭೋಗಲೆ ಮತ್ತೊಮ್ಮೆ ಗೆಲುವಿನ ನಗೆ ಬೀರಿ ಇಂಧನ ಖಾತೆ ಸಚಿವರಾದರು.
1972ರ ಚುನಾವಣೆಯಲ್ಲಿ ಗೆದ್ದ ಬೆಳಗಾವಿಯ ಆರ್.ಡಿ.ಕಿತ್ತೂರ ಗೃಹ ಸಚಿವರಾದರು. 1978ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಜಯ ಗಳಿಸಿದ ವಿ.ಎಲ್.ಪಾಟೀಲ ಕಂದಾಯ ಸಚಿವರಾದರು. 1985ರಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಅಥಣಿಯ ಎ.ಬಿ.ಜಕನೂರ ಕಾರ್ಮಿಕ ಸಚಿವರಾದರು. 1994ರಲ್ಲಿ ಜನತಾ ದಳದ ಅಭ್ಯರ್ಥಿ ಮೋಹನ ಶಹಾ ಆಯ್ಕೆಯಾದರಾದರೂ, ಅವರಿಗೆ ಸಚಿವ ಸ್ಥಾನದ ಭಾಗ್ಯ ಲಭಿಸಲಿಲ್ಲ. 1999ರಲ್ಲಿ ಗೆದ್ದ ಕಾಂಗ್ರೆಸ್‌ನ ಪೋಪಟಗೌಡ ಪಾಟೀಲ ಅಧಿಕಾರಕ್ಕೇರಿದ ಕೆಲವೇ ದಿನಗಳಲ್ಲಿ ಸಂಭವಿಸಿದ ಅಪಘಾತದಲ್ಲಿ ನಿಧನರಾದರು. 2000ರ ಉಪ ಚುನಾವಣೆಯಲ್ಲಿ ಸಂಯುಕ್ತ ಜನತಾದಳದಿಂದ ಅಖಾಡಕ್ಕಿಳಿದಿದ್ದ ರಾಜು ಕಾಗೆ ಮೊದಲ ಪ್ರಯತ್ನದಲ್ಲೇ ಗೆದ್ದರು. 2004, 2008 ಮತ್ತು 2013ರಲ್ಲಿ ಬಿಜೆಪಿಯಿಂದ ಚುನಾಯಿತರಾದರು. ಆದರೆ, ಸಚಿವ ಸ್ಥಾನ ದಕ್ಕಿರಲಿಲ್ಲ.