

ಚಿಕ್ಕಬಳ್ಳಾಪುರ: ವಾಣಿಜ್ಯ ನಗರಿಯ ಚಿಂತಾಮಣಿಯಲ್ಲಿನ ಚೇಳೂರು ರಸ್ತೆಯ ರೈಲ್ವೆ ಅಂಡರ್ ಪಾಸ್ ಬಳಿ ಚರಂಡಿಯ ನೀರು ರಸ್ತೆಗೆ ಹರಿದು, ಓಡಾಡಲು ತೊಂದರೆಯಾಗುತ್ತಿರುವ ಬಗ್ಗೆ ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಸಚಿವ ಡಾ.ಎಂ.ಸಿ.ಸುಧಾಕರ್ ವಿವಿಧೆಡೆ ಭೇಟಿ ನೀಡಿ ಪರಿಶೀಲಿಸಿದರು.
ಅರ್ಧ ಗಂಟೆ ಕಾಲ ಸಮಸ್ಯೆ ಇದ್ದ ಸ್ಥಳದಲ್ಲಿಯೇ ನಿಂತು ಅಧಿಕಾರಿಗಳು ಮತ್ತು ಪೌರಕಾರ್ಮಿಕರಿಗೆ ಸಲಹೆ ಸೂಚನೆಗಳನ್ನು ನೀಡಿದರು. ಚರಂಡಿಯಲ್ಲಿ ಹಲವು ವರ್ಷಳಿಂದ ತುಂಬಿಕೊಂಡಿದ್ದ ತ್ಯಾಜ್ಯವನ್ನು ಪೌರಕಾರ್ಮಿಕರು ಯಂತ್ರಗಳ ಮೂಲಕ ಶುಚಿತ್ವಗೊಳಿಸಿದರು.
ನಗರದ ಚೇಳೂರು ಮುಖ್ಯ ರಸ್ತೆಯ ರೈಲ್ವೆ ಅಂಡರ್ ಪಾಸ್ ಬಳಿ ನಿರ್ಮಿಸಿರುವ ಬೈಪಾಸ್ ರಸ್ತೆಯಲ್ಲಿರುವ ಚರಂಡಿಗೆ ತ್ಯಾಜ್ಯವನ್ನು ಎಸೆದಿದ್ದು ಹಲವು ವರ್ಷಗಳಿಂದ ದುರಸ್ತಿ ಕಾಣದ ಚರಂಡಿಯಲ್ಲಿ ಕಲುಷಿತ ನೀರು ಸರಿಯಾಗಿ ಹರಿಯುತ್ತಿಲ್ಲ. ಬೈಪಾಸ್ ರಸ್ತೆಯಲ್ಲಿ ಜಲಾವೃತಗೊಂಡು ಅಂಡರ್ ಪಾಸ್ ನೀರಿನಿಂದ ತುಂಬಿ ಹೋಗುತ್ತಿದೆ. ಸುಗಮ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಒಂದು ವೇಳೆ ಮಳೆ ಬಂದರೆ ಸಾಕು ರೈಲ್ವೆ ಅಂಡರ್‌ಪಾಸ್ ಬೈಪಾಸ್ ರಸ್ತೆಯಲ್ಲಿ ಕಲುಷಿತ ನೀರು ಸೇರಿಕೊಂಡು ಹಲವು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಇದರ ಬಗ್ಗೆ ಸ್ಥಳೀಯರು
ಸಚಿವರಿಗೆ ದೂರು ಸಲ್ಲಿಸಿದ್ದಾರೆ.