

ದಾವಣಗೆರೆ: ಹೊನ್ನಾಳಿ ಮಾಜಿ ಶಾಸಕ ರೇಣುಕಾಚಾರ್ಯ ಇತ್ತೀಚೆಗೆ ಕಾಂಗ್ರೆಸ್ ಸಚಿವರನ್ನು ಭೇಟಿ ಮಾಡುತ್ತಿದ್ದು ಇದರಿಂದ ಸ್ಥಳೀಯ ನಿಷ್ಟಾವಂತ ಕಾರ್ಯಕರ್ತರಿಗೆ ಗೊಂದಲ ಉಂಟಾಗುತ್ತಿದೆ ಎಂದು ಶಾಸಕ ಬಸವರಾಜ್ ವಿ. ಶಿವಗಂಗಾ ಹೇಳಿದರು.
ಚನ್ನಗಿರಿ ಪಟ್ಟಣದಲ್ಲಿ ಮಾತನಾಡಿದ ಅವರು, ರೇಣುಕಾಚಾರ್ಯ ಪ್ರಚಾರ ಪ್ರಿಯರು. ಅಧಿಕಾರ ಇರಲಿ ಬಿಡಲಿ ಅವರಿಗೆ ಪ್ರಚಾರ ಬೇಕು. ಹೀಗಾಗಿ, ಕ್ಷೇತ್ರದ ಸಮಸ್ಯೆಗಳ ನೆಪದಲ್ಲಿ ಸಚಿವರ ಭೇಟಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ವಿರೋಧ ಪಕ್ಷದ ನಾಯಕರನ್ನೇ ಆಯ್ಕೆ ಮಾಡದ ಬಿಜೆಪಿ ನಾವಿಕನಿಲ್ಲದ ದೋಣಿಯಾಗಿದ್ದು, ರಾಜಕೀಯವಾಗಿ ತಮ್ಮ ಬೇಳೆ ಬೇಯಿಸಿಕೊಳ್ಳಲು ರೇಣುಕಾಚಾರ್ಯ ಮುಂದಾಗುತ್ತಿದ್ದಾರೆ. ಇಂತಹವರಿಗೆ ಸಚಿವರು ಪ್ರಾಮುಖ್ಯತೆ ನೀಡಬಾರದು. ಕಾಂಗ್ರೆಸ್ ಶಾಸಕರಿಗೆ ಸಚಿವರನ್ನು ಭೇಟಿ ಮಾಡಲು ಅವಕಾಶ ಸಿಗುತ್ತಿಲ್ಲ, ಕೊನೆ ಪಕ್ಷ ಸಚಿವರಿಗೆ ಫೋನ್ ಕರೆ ಮಾಡಿದರೂ ಪ್ರತಿಕ್ರಿಯಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹಿಂದೆ ಅಧಿಕಾರಕ್ಕಾಗಿ ರೆಸಾರ್ಟ್ ರಾಜಕಾರಣ ಮಾಡಿದ್ದ ರೇಣುಕಾಚಾರ್ಯ ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಇದೀಗ ಅಧಿಕಾರ ಇಲ್ಲದ ಕಾರಣ ಪ್ರಚಾರಕ್ಕಾಗಿ ಕಾಂಗ್ರೆಸ್ ಸಚಿವರ ಭೇಟಿ ಮಾಡುವ ನಾಟಕ ಶುರು ಮಾಡಿದ್ದಾರೆ. ಕಳೆದ ಬಾರಿ ಅವರದ್ದೇ ಸರ್ಕಾರವಿದ್ದರೂ ಜನರ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ, ಹೀಗಾಗಿ ಹೊನ್ನಾಳಿ ಜನರು ತಿರಸ್ಕಾರ ಮಾಡಿದ್ದಾರೆ ಎಂದರು.
ಇತ್ತೀಚೆಗೆ ಗ್ಯಾರಂಟಿಗಳ ವಿರುದ್ಧ ಅಭಿಯಾನ ಮಾಡಿದ ರೇಣುಕಾಚಾರ್ಯರನ್ನು ಕಾಂಗ್ರೆಸ್ ನಾಯಕರು ಹತ್ತಿರಕ್ಕೂ ಬಿಟ್ಟುಕೊಳ್ಳಬಾರದು. ಲೋಕಸಭಾ ಚುನಾವಣೆ ಹತ್ತಿರವಿದ್ದು ಪಕ್ಷದ ಕಾರ್ಯಕರ್ತರಿಗೆ ಇಂತಹ ವಿಚಾರ ಗೊಂದಲಕ್ಕೆ ಕಾರಣವಾಗುತ್ತಿದೆ ಎಂದು ಹೇಳಿದರು.