ಸಹಕಾರಿ ಸಂಘಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು

minister visit
Published on

ಸಚಿವ ಕೆ.ಎಚ್.ಮುನಿಯಪ್ಪ ಹೇಳಿಕೆ

ವಿಜಯವಾಣಿ ಸುದ್ದಿಜಾಲ ಚನ್ನರಾಯಪಟ್ಟಣ
ಆ.1ರಿಂದ ಹಾಲಿಗೆ 3 ರೂ.ಹೆಚ್ಚಳವಾಗುತ್ತಿದ್ದು, ಆ ಹಣ ರೈತರಿಗೆ ಸಿಗಲಿದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಹೋಬಳಿಯ ಐಬಸಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ವಿಸ್ತರಣಾ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ರೈತರು ಹಾಲು ಸರಬರಾಜು ಮಾಡಬೇಕಾದರೆ, ಹಸುಗಳಿಗೆ ಹಾಕುವ ಇಂಡಿ, ಬೂಸ ಎಲ್ಲದರ ಬೆಲೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಲು ಬೆಲೆ ಹೆಚ್ಚಳ ಮಾಡಿದರೆ, ರೈತರಿಗೆ ಸಿಗುವಂತಾಗಬೇಕು ಎಂಬ ಉದ್ದೇಶ ಹೊಂದಿದ್ದಾರೆ. ಗುಣಮಟ್ಟದ ಹಾಲು ಸರಬರಾಜು ಮಾಡಿದರೆ, ರೈತರಿಗೆ ಆದಾಯ ಸಿಗುತ್ತದೆ. ಸಂಘ ಅಭಿವೃದ್ಧಿಯಾಗುತ್ತದೆ. ದೇವನಹಳ್ಳಿ ತಾಲೂಕಿನಾದ್ಯಂತ ಸರ್ಕಾರಿ ಶಾಲೆ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು.
ಬಮುಲ್ ನಿರ್ದೇಶಕ ಶ್ರೀನಿವಾಸ ಮಾತನಾಡಿ, ತಾಲೂಕಿನ ಸಹಕಾರಿ ಸಂಘಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ತಾಲೂಕಿನಲ್ಲಿ ಸುಮಾರು 7 ಸಹಕಾರಿ ಸಂಘಗಳ ಸ್ವಂತ ಕಟ್ಟಡ ನಿರ್ಮಾಣವಾದರೆ, ತಾಲೂಕಿನ ಎಲ್ಲ ಗ್ರಾಮಗಳ ಹಾಲು ಉತ್ಪಾದಕರ ಸ್ವಂತ ಕಟ್ಟಡಗಳು ನಿರ್ಮಾಣವಾದಂತಾಗುತ್ತದೆ. ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಬಮುಲ್‌ನಿಂದ ಬರುವ ಸೌಲಭ್ಯಗಳು ನೀಡಲಾಗುತ್ತಿದೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಬಿ.ರಾಜಣ್ಣ ಮಾತನಾಡಿ, ದಿನ್ನೂರು ಗ್ರಾಮದಿಂದ ಐಬಸಾಪುರ ಗೋಪ್ಸಂದ್ರ ಗ್ರಾಮಗಳಿಗೆ ರಸ್ತೆ ಅಗಲೀಕರಣ, ರಸ್ತೆ ಅಭಿವೃದ್ಧಿಗೆ 3 ಕೋಟಿ ರೂ. ಮಂಜೂರಾಗಿದ್ದು, ಸಚಿವರು ಮುಂದಿನ ದಿನಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದರು.
ಸಂಘದ ಅಧ್ಯಕ್ಷ ರಾಜಣ್ಣ, ಜಿಕೆವಿಕೆ ಬೆಂಗಳೂರು ಸಹ ಪ್ರಾಧ್ಯಾಪಕ ಸಿ.ನಾರಾಯಣಸ್ವಾಮಿ, ಸಂಘದ ಉಪಾಧ್ಯಕ್ಷ ದೇವರಾಜ್, ನಿರ್ದೇಶಕರಾದ ಅಂಜನಪ್ಪ ಶಂಕ್ರಪ್ಪ, ರಾಜಣ್ಣ, ಕೃಷ್ಣಪ್ಪ ಆನಂದ್, ಅಶ್ವತ್ಥಪ್ಪ, ಮಂಜುನಾಥ್, ಯಶೋದಮ್ಮ, ಲಕ್ಷ್ಮಮ್ಮ, ಅರುಣ್ ಕುಮಾರ್, ಚಿಕ್ಕನಾರಾಯಣಪ್ಪ, ಜಿಪಂ ಮಾಜಿ ಸದಸ್ಯ ಲಕ್ಷ್ಮೀನಾರಾಯಣ್, ತಾಪಂ ಮಾಜಿ ಸದಸ್ಯರಾದ ವೆಂಕಟೇಶ್ ಮಂಜುನಾಥ್, ಲಕ್ಷ್ಮಣಗೌಡ, ಚನ್ನರಾಯಪಟ್ಟಣ ರೇಷ್ಮೆ ಬೆಳೆಗಾರರು ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ನಂಜೇಗೌಡ, ಗ್ರಾಪಂ ಸದಸ್ಯ ಕೇಶವ್, ಗುತ್ತಿಗೆದಾರ ಮಂಜುನಾಥ್, ಗ್ರಾಮದ ಮುಖಂಡ ಲಕ್ಷ್ಮಣ್, ವಿತರಣಾಧಿಕಾರಿ ವಿಜಯಕುಮಾರ್, ಸಂಘದ ಕಾರ್ಯದರ್ಶಿ ಮಂಜುನಾಥ್, ಹಾಲು ಪರೀಕ್ಷಕ ವೆಂಕಟೇಶ್, ಸಹಾಯಕ ರಾಮಾಂಜಿನಪ್ಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net