

ವಿಜಯವಾಣಿ ಸುದ್ದಿಜಾಲ ಉಡುಪಿ
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಅಭಿವೃದ್ಧಿಯ ಪರ್ವವೇ ನಡೆದಿದೆ. ಯುಪಿಎ ಸರ್ಕಾರ 50 ವರ್ಷದಲ್ಲಿ ಮಾಡದ ಕಾರ್ಯವನ್ನು ಕೇವಲ 10 ವರ್ಷದಲ್ಲಿ ಮೋದಿ ಸಾಧಿಸಿದ್ದಾರೆ. 50 ವರ್ಷದ ಹಿಂದೆಯೇ ಮೋದಿ ಪ್ರಧಾನಿಯಾಗಿದ್ದರೆ ಅಮೆರಿಕವನ್ನೇ ಮೆಟ್ಟಿ ನಿಲ್ಲುವಂತಹ ವಿಶ್ವದ ಅಗ್ರಗಣ್ಯ ದೇಶ ಭಾರತ ಆಗಿರುತ್ತಿತ್ತು. ಈಗಲೂ ಸಹ ಆ ಕಾರ್ಯ ಮುನ್ನಡೆದಿದೆ. ಕೆಲವೇ ವರ್ಷಗಳಲ್ಲಿ ಭಾರತವು ವಿಶ್ವಗುರು ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅಭಿಪ್ರಾಯಪಟ್ಟರು.
ಉಡುಪಿಯ ಇಂದ್ರಾಳಿಯಲ್ಲಿ ಕೇಂದ್ರೀಯ ಭೂ ಸಾರಿಗೆ ಮಂತ್ರಾಲಯ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡ ರೈಲ್ವೆ ಮೇಲ್ಸೇತುವೆಯನ್ನು ಸೆಪ್ಟೆಂಬರ್ 21ರಂದು ಬೆಳಗ್ಗೆ ಉದ್ಘಾಟಿಸಿ ಮಾತನಾಡಿದರು.
ಮಾಜಿ ಸಚಿವ ಪ್ರಮೋದ ಮಧ್ವರಾಜ್, ಶಾಸಕರಾದ ಸುನೀಲಕುಮಾರ್, ಕಿರಣಕುಮಾರ ಕೊಡ್ಗಿ, ಗುರ್ಮೆ ಸುರೇಶ ಶೆಟ್ಟಿ, ಗುರುರಾಜ ಗಂಟಿಹೊಳೆ, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯಕ್ಷೆ ರಜನಿ ಹೆಬ್ಬಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ನಗರಸಭಾ ಆಯುಕ್ತ ಮಹಾಂತೇಶ ಹಂಗರಗಿ, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಜಿಲ್ಲಾ ಪೊಲೀಸ್ ವರಿಷ್ಠ ಹರಿರಾಂ ಶಂಕರ್, ದಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ ಕುಂಪಿಲ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ರಾ.ಹೆ. ಇಲಾಖೆಯ ಅಧಿಕಾರಿಗಳಾದ ಎಂ.ಕಿರಣ, ಲೋಕೇಶ ಉಪಸ್ಥಿತರಿದ್ದರು.
ಸುಜಲಾ ಎಸ್. ಸುವರ್ಣ ಒಂದೇ ಮಾತರಂ ಗೀತೆ ಹಾಡಿದರು. ನಗರಸಭಾ ಸದಸ್ಯ ಗಿರೀಶ ಅಂಚನ್ ಸ್ವಾಗತಿಸಿದರು. ಇಂದ್ರಾಳಿ ವಾರ್ಡ್ ಸದಸ್ಯ ಅಶೋಕ ನಾಯ್ಕ ವಂದಿಸಿದರು. ಸತೀಶ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಆರ್ಥಿಕ, ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ದೇಶದಲ್ಲಿಯೇ ಉಡುಪಿ ಜಿಲ್ಲೆ ಗಮನ ಸೆಳೆಯುತ್ತದೆ. ಅಭಿವೃದ್ಧಿಯಲ್ಲೂ ಸಹ ರಾಜ್ಯದಲ್ಲಿ ಮುಂಚೂಣಿಯಲ್ಲಿದೆ. ಇಂದಿನ ಸಂದರ್ಭದಲ್ಲಿ ದಿ. ವಿ.ಎಸ್. ಆಚಾರ್ಯ ಅವರನ್ನು ನೆನೆಪಿಸಿಕೊಳ್ಳಬೇಕಿದೆ. ಊಹಿಸಲೂ ಸಾಧ್ಯವಿಲ್ಲದಂತೆ ಇದ್ದ ಉಡುಪಿ- ಮಣಿಪಾಲ ರಸ್ತೆ ಮಾರ್ಗ ಇಂದು ಕಂಗೊಳಿಸುತ್ತಿರುವಲ್ಲಿ ಅವರ ಕೊಡುಗೆ ಅಪಾರವಿದೆ. | ಯಶ್ಪಾಲ್ ಸುವರ್ಣ. ಉಡುಪಿ ಶಾಸಕ.