

ಸುಯೋಗ ಕಿಲ್ಲೇದಾರ ಬೋರಗಾಂವ: ಗಡಿ ಭಾಗದಲ್ಲಿ ‘ಕಿಲ್ಲರ್ ಕರೊನಾ’ ತಾಂಡವಾಡುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ತಜ್ಞ ವೈದ್ಯರ ಕೊರತೆ ಎದುರಾಗಿದ್ದು, ಸಾರ್ವಜನಿಕ ಆಸ್ಪತ್ರೆಗಳು ಬಣಗುಡುತ್ತಿವೆ. ಸೂಕ್ತ ಚಿಕಿತ್ಸೆ ಲಭಿಸದೆ ಗ್ರಾಮೀಣ ಪ್ರದೇಶದ ಜನ ಪರದಾಡುವಂತಾಗಿದೆ.
ಚಿಕ್ಕೋಡಿ ಅಪರ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ವ್ಯಾಪ್ತಿಯಲ್ಲಿ ಬರುವ ಚಿಕ್ಕೋಡಿ, ಅಥಣಿ, ರಾಯಬಾಗ, ಗೋಕಾಕ ಮತ್ತು ಹುಕ್ಕೇರಿ ತಾಲೂಕು ಒಳಗೊಂಡ ನಿಯೋಜಿತ ಚಿಕ್ಕೋಡಿಯಲ್ಲಿ 52 ತಜ್ಞ ವೈದ್ಯರ ಕೊರತೆ ಇದೆ. ಇದರಿಂದ ಬಡ ರೋಗಿಗಳು ಖಾಸಗಿ ಆಸ್ಪತ್ರೆಗಳಿಗೆ ತೆರಳಬೇಕಾಗಿದೆ.
ಎರಡ್ಮೂರು ಆಸ್ಪತ್ರೆಯಲ್ಲಿ ಕರ್ತವ್ಯ: ನಿಯೋಜಿತ ಚಿಕ್ಕೋಡಿ ಜಿಲ್ಲೆಯ ವ್ಯಾಪ್ತಿಯಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಅರ್ಧಕ್ಕಿಂತ ಹೆಚ್ಚಿನ ಹುದ್ದೆಗಳು ಖಾಲಿಯಿವೆ. ಇದರಿಂದ ಕೆಲ ವೈದ್ಯರು ಎರಡ್ಮೂರು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿದೆ.
ವಾರದಲ್ಲಿ ಒಂದೊಂದು ಆಸ್ಪತ್ರೆಯಲ್ಲಿ ಮೂರು ಮೂರು ದಿನಗಳ ಕರ್ತವ್ಯ ನಿರ್ವಹಿಸುವಂತಾಗಿದೆ. ಇದರಿಂದ ಗ್ರಾಮೀಣ ಪ್ರದೇಶದ ಜನರು ಅಗತ್ಯ ವೈದ್ಯಕೀಯ ಸೇವೆಯಿಂದ ವಂಚಿತರಾಗುತ್ತಿದ್ದಾರೆ.
ನಾಲ್ವರ ಸಚಿವರ ತವರು ಜಿಲ್ಲೆ: ನಿಯೋಜಿತ ಚಿಕ್ಕೋಡಿ ಜಿಲ್ಲೆಯ ವ್ಯಾಪ್ತಿಯಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ಸಚಿವ ಶ್ರೀಮಂತ ಪಾಟೀಲ ತವರು ಜಿಲ್ಲೆಯಲ್ಲಿ ತಜ್ಞ ವೈದ್ಯರು ಇಲ್ಲದೇ ಇರುವುದರಿಂದ ಸರ್ಕಾರಿ ಆಸ್ಪತ್ರೆಗಳು ಬಾಗಿಲು ಮುಚ್ಚುವ ಸ್ಥಿತಿಗೆ ಬಂದಿವೆ. ಬಡ ಜನರ ಆರೋಗ್ಯದ ಕಡೆ ಗಮನ ಹರಿಸಿ ವೈದ್ಯರ ನೇಮಕ ಮಾಡಬೇಕು ಎಂಬುದು ಗಡಿ ಜನರ ಒತ್ತಾಯವಾಗಿದೆ.
ತಾಲೂಕುವಾರು ಖಾಲಿಯಿರುವ ವೈದ್ಯರ ಮಾಹಿತಿ: ಚಿಕ್ಕೋಡಿ ತಾಲೂಕಿನ ವಿವಿಧ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಲು 39 ವೈದ್ಯರ ಮಂಜೂರಾತಿಯಿದೆ. ಇದರಲ್ಲಿ 14 ವೈದ್ಯರ ಕೊರತೆ ಇದೆ. ಅಥಣಿ ತಾಲೂಕಿನಲ್ಲಿ 38 ವೈದ್ಯರ ಹುದ್ದೆ ಮಂಜೂರಾಗಿದ್ದು 4 ವೈದ್ಯರ ಹುದ್ದೆ ಖಾಲಿ ಇದೆ. ಗೋಕಾಕ ತಾಲೂಕಿನಲ್ಲಿ 48 ಹುದ್ದೆಗಳಿದ್ದು 14 ಹುದ್ದೆಗಳು ಖಾಲಿಯಿವೆ. ಹುಕ್ಕೇರಿ ತಾಲೂಕಿನಲ್ಲಿ 39 ಹುದ್ದೆಗಳಲ್ಲಿ 6 ಹುದ್ದೆ ಖಾಲಿ ಇವೆ. ರಾಯಬಾಗ ತಾಲೂಕಿನಲ್ಲಿ 28 ವೈದ್ಯರಲ್ಲಿ 14 ವೈದ್ಯರ ಹುದ್ದೆಗಳು ಖಾಲಿ ಇವೆ.
ಇಡೀ ರಾಜ್ಯದಲ್ಲಿಯೇ ವೈದ್ಯರ ಕೊರತೆಯಿದೆ. ವೈದ್ಯರ ನೇಮಕಕ್ಕೆ ನಾಲ್ಕು ಬಾರಿ ಟೆಂಡರ್ ಕರೆದಿದ್ದರೂ ವೈದ್ಯರು ಮುಂದೆ ಬರುತ್ತಿಲ್ಲ. ಹೀಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿರುವುದು ನಿಜ.ಇರುವಷ್ಟು ವೈದ್ಯರಲ್ಲಿಯೇ ಸೇವೆ ನೀಡಲಾಗುತ್ತಿದೆ. | ಡಾ. ಎಸ್.ವಿ. ಮುನ್ಯಾಳ ಜಿಲ್ಲಾ ಆರೋಗ್ಯಾಧಿಕಾರಿ ಬೆಳಗಾವಿ.