ಸಚಿವ ತಿಮ್ಮಾಪೂರ ಜನರ ಪರ ಧ್ವನಿ

Minister Thimmapur's voice for the people
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾದಿಗ ಸಮಾಜದ ಮುಖಂಡ ರಾಜು ಮನ್ನಿಕೇರಿ ಮಾತನಾಡಿದರು. ಮುಖಂಡರಾದ ಶಿವಾನಂದ ಮಾದರ, ಮುತ್ತಣ್ಣ ಮೇತ್ರಿ, ಶ್ಯಾಮ ದೊಡಮನಿ ಮುಂತಾದವರು ಉಪಸ್ಥಿತರಿದ್ದರು.
Published on

ಬಾಗಲಕೋಟೆ: ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ನೇಮಕಗೊಂಡಿರುವುದು ಜಿಲ್ಲೆಯ ಜನತೆಯಲ್ಲಿ ಸಂತಸ ಹೆಚ್ಚಿಸಿದೆ. ಮಾದಿಗ ಸಮಾಜದಲ್ಲಿ ದೊಡ್ಡ ಸಂಭ್ರಮ ತಂದಿದೆ. ಶೋಷಿತರು, ರೈತರು, ಕಾರ್ಮಿಕರ ಒಟ್ಟಾರೆ ಜನಪರ ಧ್ವನಿ ತಿಮ್ಮಾಪೂರ ಅವರಾಗಿದ್ದಾರೆ. ಅವರ ಅವಧಿಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯಾಗಲಿದೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದು ಮಾದಿಗ ಸಮಾಜದ ಮುಖಂಡ ರಾಜು ಮನ್ನಿಕೇರಿ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರ ಇರಲಿ, ಇರದೆ ಇರಲಿ. ಸದಾ ಜನಪರ ಕಾರ್ಯ, ಹೋರಾಟಗಳಲ್ಲಿ ಭಾಗಿಯಾಗುತ್ತ ಬಂದಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಮುಧೋಳದಲ್ಲಿ ನಡೆದ ರನ್ನ ಸಹಕಾರಿ ಕಾರ್ಖಾನೆ ಕಾರ್ಮಿಕರು, ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿ, ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದರು ಎಂದರು.

ಜಿಲ್ಲೆಯ ನೇಕಾರರು ಸೇರಿದಂತೆ ಎಲ್ಲ ವರ್ಗದ ಜನರ ಕಷ್ಟ-ಸಮಸ್ಯೆಗಳಿಗೆ ಸಚಿವರು ಸ್ಪಂದಿಸಲಿದ್ದಾರೆ. ಉಸ್ತುವಾರಿ ಸಚಿವರಾದ ಬಳಿಕ ಜೂ.11ರಂದು ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿದ್ದು, ಅಂದು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಯೋಜನೆಗೆ ಚಾಲನೆ ನೀಡಲಿದ್ದಾರೆ. ಸರ್ಕಾರಿ ಕಾರ್ಯಕ್ರಮದ ಬಳಿಕ ನೀರಲಕೇರಿ ಹತ್ತಿರದ ವೃದ್ಧಾಶ್ರಮದಲ್ಲಿ ಹಿರಿಯರಿಗೆ ಸಿಹಿ ವಿತರಿಸಿ, ಸರ್ಕಾರದ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ ಖುಷಿ ಹಂಚಿಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಸಮಾಜದ ಹಿರಿಯ ಮುಖಂಡ ವೈ.ವೈ.ತಿಮ್ಮಾಪೂರ ಮಾತನಾಡಿ, ಸಚಿವ ಆರ್.ಬಿ.ತಿಮ್ಮಾಪೂರ ಅವರು ಮುಧೋಳ ಕ್ಷೇತ್ರದಿಂದ ಆಯ್ಕೆಯಾದ ಬಳಿಕ ಅವರಿಗೆ ಉಪ ಮುಖ್ಯಮಂತ್ರಿ ಮಾಡಬೇಕು ಎಂದು ನಾವು ಮನವಿ ಮಾಡಿದ್ದೇವು. ಪಕ್ಷ ಅವರಿಗೆ ಸಚಿವ ಸ್ಥಾನ ನೀಡಿದ್ದು, ಖುಷಿ ತಂದಿದೆ ಎಂದು ತಿಳಿಸಿದರು.
ಮುಖಂಡರಾದ ಶಿವಾನಂದ ಮಾದರ, ಮುತ್ತಣ್ಣ ಮೇತ್ರಿ, ಶ್ಯಾಮ ದೊಡಮನಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net