ಸಚಿವ ಸುನೀಲ್‌ಗೆ ಅದ್ದೂರಿ ಸ್ವಾಗತ

Sunil Kumar
Published on

ಬೆಳ್ಮಣ್: ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸ್ವಕ್ಷೇತ್ರಕ್ಕೆ ಮೊದಲ ಬಾರಿ ಆಗಮಿಸಿದ ವಿ.ಸುನೀಲ್ ಕುಮಾರ್ ಅವರನ್ನು ಶುಕ್ರವಾರ ಬೆಳ್ಮಣ್‌ನಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅದ್ದೂರಿಯಾಗಿ ಬರಮಾಡಿಕೊಂಡರು.

ಸಚಿವ ಸುನೀಲ್ ಕುಮಾರ್ ಮಾತನಾಡಿ, ಸಚಿವನಾಗಿ ಮೊದಲ ಬಾರಿಗೆ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವುದು ಅತ್ಯಂತ ಖುಷಿ ನೀಡುತ್ತಿದೆ. ಮೂರು ಬಾರಿ ನನ್ನನ್ನು ಶಾಸಕನಾಗಿ ಮಾಡಿದ ಈ ಕ್ಷೇತ್ರದ ಜನತೆ ಹಾಗೂ ಕಾರ್ಯಕರ್ತರಿಗೆ ವಂದಿಸುತ್ತೇನೆ ಎಂದರು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಂಗಳೂರು ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿ, ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಹಾಗೂ ಪಕ್ಷದ ನಾಯಕರಿದ್ದರು. ಪಕ್ಷದ ಜಿಲ್ಲೆಯ ನಾಯಕರು, ತಾಲೂಕಿನ ನಾಯಕರ ಜತೆ ಬಿಜೆಪಿ ಬೆಂಬಲಿತ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಜಿಪಂ ಹಾಗೂ ತಾಪಂಗಳ ಮಾಜಿ ಸದಸ್ಯರು, ಉದ್ಯಮಿಗಳು ಹಾಗೂ ನಾಗರಿಕರಿದ್ದರು. ಸಚಿವರಾಗಿ ಮೊದಲ ಬಾರಿಗೆ ಕ್ಷೇತ್ರಕ್ಕೆ ಭೇಟಿ ಕೊಡುತ್ತಿದ್ದ ಸುನೀಲ್ ಕುಮಾರ್ ಅವರನ್ನು ಭೇಟಿ ಮಾಡಲು ಸಹಸ್ರಾರು ಮಂದಿ ಸೇರಿದ್ದು, ಜಾತಿ, ಪಕ್ಷ ಭೇದ ಮರೆತು ಸಚಿವರನ್ನು ಸ್ವಾಗತಿಸಿದರು. ಬೆಳ್ಮಣ್ ಬಸ್ಸು ನಿಲ್ದಾಣದಲ್ಲಿ ಕಾಲ್ನಡಿಗೆಯಲ್ಲೇ ಸಾಗಿದ ಜನ ಕರೊನಾವನ್ನೂ ಮರೆತು ಸಚಿವರನ್ನು ನೋಡಲು ಮುಗಿಬಿದ್ದರು.

ಹಿರಿಯರ ಮಾರ್ಗದರ್ಶನ ಪಡೆದು ಕೆಲಸ: ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು ಸುನೀಲ್‌ಕುಮಾರ್, ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಪಕ್ಷ ಗೌರವ ಕೊಟ್ಟಿದೆ. ನಾನು ಸಚಿವನಾಗಿ ಕೆಲಸ ಮಾಡಲು ಹಾಲಾಡಿ, ಕೋಟ ಶ್ರೀನಿವಾಸ ಪೂಜಾರಿ ಹಾಗೂ ಅಂಗಾರ ಅವರ ಹಾಗೂ ಹಿರಿಯರ ಮತ್ತು ಪ್ರಮುಖರ ಮಾರ್ಗದರ್ಶನ ಪಡೆಯುತ್ತೇನೆ ಎಂದರು. ಇಷ್ಟದ ಖಾತೆ ಎಂದು ಯಾವುದೂ ಇಲ್ಲ. ಮುಖ್ಯಮಂತ್ರಿ ಯಾವ ಖಾತೆ ನೀಡಿದರೂ ನಿಷ್ಠೆಯಿಂದ ನಿಭಾಯಿಸುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net