ಪಠ್ಯದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಸಾಧನೆ ; ಸಾರಿಗೆ ಹಾಗೂ ಪರಿಶಿಷ್ಟ ಪಂಗಡಗಳ ಸಚಿವ ಬಿ.ಶ್ರೀರಾಮುಲು ಮುನ್ಸೂಚನೆ

Gubbi veeranna kalkshetrhara (3)
Published on

ತುಮಕೂರು: ದಿನನಿತ್ಯ ಸ್ಮರಣೆ ಮಾಡಬೇಕಾದವರ ಪಟ್ಟಿಯಲ್ಲಿ ಅಂಬೇಡ್ಕರ್, ವಾಲ್ಮೆಕಿ, ಬಸವಣ್ಣ ಹಾಗೂ ಡಾ.ಶಿವಕುಮಾರ ಸ್ವಾಮೀಜಿ ಇದ್ದಾರೆ, ಅವರ ಜೀವನ ಆದರ್ಶಗಳನ್ನು ಬದುಕಿನಲ್ಲಿ ಮೈಗೂಡಿಸಿಕೊಳ್ಳಬೇಕು, ಮುಂದಿನ ದಿನದಲ್ಲಿ ಡಾ.ಶಿವಕುಮಾರಸ್ವಾಮೀಜಿ ಅವರ ಬಗ್ಗೆ ಪಠ್ಯದಲ್ಲಿ ಓದಿ ತಿಳಿದುಕೊಳ್ಳುವ ಕಾಲ ಬರಲಿದೆ ಎಂದು ಸಾರಿಗೆ ಹಾಗೂ ಪರಿಶಿಷ್ಟ ಪಂಗಡಗಳ ಸಚಿವ ಬಿ.ಶ್ರೀರಾಮುಲು ಹೇಳಿದರು.

ನಗರದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಮಂಗಳವಾರ ರಾತ್ರಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 54 ಕೋಟಿ ರೂ. ವೆಚ್ಚದಲ್ಲಿ ವಸತಿ ಶಾಲೆ ನಿರ್ಮಿಸಲಾಗಿದೆ. ಪರಿಶಿಷ್ಟ ಮಕ್ಕಳು ಓದಬೇಕು ಎಂಬ ಉದ್ದೇಶದಿಂದ ಸರ್ಕಾರ ಸೌಲಭ್ಯ ನೀಡಿದ್ದು ಸದುಪಯೋಗ ಪಡೆಯಬೇಕು, ನಮ್ಮ ಸೇವೆಗೆ ಡಾ.ಶಿವಕುಮಾರ ಸ್ವಾಮೀಜಿ ಅವರೇ ಪ್ರೇರಣೆಯಾಗಿದ್ದು ಅವರಿದ್ದ ಜಿಲ್ಲೆಯ ಮಕ್ಕಳು ಪುಣ್ಯವಂತರು ಎಂದು ಸ್ಮರಿಸಿದರು.

ಪರಿಶಿಷ್ಟ ಪಂಗಡ, ಜಾತಿಯ ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಬೇಕು, ಆಗಸ್ಟ್ 4ರಂದು ರಾಜ್ಯದಲ್ಲಿ ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕ ಸಚಿವಾಲಯ ಸೃಜಿಸಿ ಐತಿಹಾಸಿಕ ನಿರ್ಣಯ ಕೈಗೊಳ್ಳಲಾಗಿದೆ, ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸಬೇಕು ಎಂದರು. ವಾಲ್ಮೆಕಿ ಸಮುದಾಯಕ್ಕೆ ಮೂಲಸೌಕರ್ಯ ಒದಗಿಸಲು ಇಲಾಖೆ ಶ್ರಮವಹಿಸಿ ದುಡಿಯಬೇಕು, 1435 ಕೋಟಿ ರೂ. ಬಜೆಟ್‌ನಲ್ಲಿ ಮೀಸಲಿಡಲಾಗಿದ್ದು ವಿದ್ಯಾರ್ಥಿಗಳಿಗೆ ಹೆಚ್ಚು ಸೌಕರ್ಯ ಒದಗಿಸುವ ಗುರಿ ಇದೆ ಎಂದರು. ಸಂಸ್ಕಾರದ ಜತೆ ವಿದ್ಯೆ ಕಲಿಯಬೇಕು ಎಂಬ ಆಶಯದಿಂದ ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ, ಕೇವಲ ಒಳಜಗಳಕಷ್ಟೇ ಸಮುದಾಯ ಮೀಸಲಾಗಬಾರದು, ಎಲ್ಲ ಮಕ್ಕಳಿಗೂ ವಿದ್ಯೆ ದೊರೆಯುವಂತಾಗಬೇಕು ಎಂದರು.

ಹೀರೋ ಯಾರೇ ಇರಲಿ ಬಿಎಸ್‌ವೈ ದೊಡ್ಡ ನಿರ್ದೇಶಕರು : ಹೀರೋಗಳು ಎಷ್ಟೇ ಉತ್ತಮವಾಗಿ ಅಭಿನಯಿಸಿ ಸಿನಿಮಾ ಗೆಲ್ಲಿಸಿದರೂ ನಿರ್ದೇಶಕರ ಪಾತ್ರ ಬಹುದೊಡ್ಡದು. ಯಡಿಯೂರಪ್ಪ ದೊಡ್ಡ ನಿರ್ದೇಶಕರು. ಪಕ್ಷಕ್ಕೆ ಅವರು ದೊಡ್ಡ ಶಕ್ತಿ ಇದ್ದಂತೆ, ಬಿಎಸ್‌ವೈ ಮಾರ್ಗದರ್ಶನದಲ್ಲೇ ಮುಂದಿನ ಚುನಾವಣೆ ಎದುರಿಸಲಾಗುವುದು ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು. ನಗರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಸಮಾರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2023ರ ವಿಧಾನಸಭೆ ಚುನಾವಣೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಎದುರಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಘೋಷಿಸಿದ್ದಾರೆ. ಹೀರೋಗಳು ಉತ್ತಮವಾಗಿ ನಟಿಸಿ ಚಿತ್ರ ಗೆಲ್ಲಿಸುತ್ತಾರೊ. ಅಷ್ಟೇ ಮುಖ್ಯವಾದ ಪಾತ್ರ ನಿರ್ದೇಶಕರದ್ದೂ ಸಹ. ರಾಜ್ಯದಲ್ಲಿ ಪಕ್ಷವನ್ನು ಸದೃಢವಾಗಿ ಕಟ್ಟಿ ಬೆಳೆಸಿದ ಯಡಿಯೂರಪ್ಪ ಹಾಗೂ ಅಮಿತ್ ಷಾ ಸೇರಿ ವರಿಷ್ಠರ ಸಮ್ಮುಖದಲ್ಲೇ ಮುಂದಿನ ಚುನಾವಣೆ ಎದುರಿಸಲಾಗುವುದು ಎಂದು ಪ್ರತಿಕ್ರಿಯಿಸಿದರು.

ಶ್ರೀರಾಮುಲು ಸುಮ್ಮನೆ ಆದವನಲ್ಲ, 7 ಚುನಾವಣೆಯಲ್ಲಿ ಗೆದ್ದು ಈ ಮಟ್ಟಕ್ಕೆ ಬೆಳೆದಿದ್ದೇನೆ, ನನ್ನನ್ನು ಕಳೆದುಕೊಂಡರೆ ಮುಂದಿನ 10 ವರ್ಷ ಸಮುದಾಯದಲ್ಲಿ ನಾಯಕತ್ವ ಸಿಗಲಾರದು, ನನ್ನ ಕಾಲು ಎಳೆದರೆ ಸಮುದಾಯಕಷ್ಟೇ ನಷ್ಟ, ನಮ್ಮ ಕಾಲು ನಾವು ಎಳೆಯುವುದನ್ನು ಬಿಟ್ಟು ಸಮುದಾಯದ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿರೋಣ. ಶ್ರೀರಾಮುಲು, ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net