ಮೂರು ಡಿಸಿಎಂ ಸ್ಥಾನ ಅನವಶ್ಯಕ, ಸಿದ್ದರಾಮಯ್ಯ-ಡಿಕೆಶಿ ಸಮರ್ಥರಿದ್ದಾರೆ ಎಂದ ಸಚಿವ ಶಿವಾನಂದ ಪಾಟೀಲ

VJP SHIVANANDA PATIL
Published on

ವಿಜಯಪುರ: ರಾಜ್ಯದಲ್ಲಿ ಹೆಚ್ಚುವರಿ ಡಿಸಿಎಂ ಸ್ಥಾನಗಳನ್ನು ಸೃಷ್ಟಿಸುವುದು ಅನವಶ್ಯಕ. ಈಗಿರುವ ಸಿಎಂ ಹಾಗೂ ಡಿಸಿಎಂ ಸಮರ್ಥವಾಗಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಮೂವರು ಡಿಸಿಎಂ ಸ್ಥಾನ ಅನಗತ್ಯ ಎಂದು ಜವಳಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅಭಿಪ್ರಾಯಿಸಿದರು.

ರಾಜ್ಯದಲ್ಲಿ ಪ್ರಾದೇಶಿಕ ಹಾಗೂ ಜಾತಿ ಲೆಕ್ಕಾಚಾರದಡಿ ಮೂವರು ಇಲ್ಲವೇ ನಾಲ್ಕು ಡಿಸಿಎಂ ಹುದ್ದೆ ಸೃಷ್ಠಿಸಬೇಕೆಂಬ ಕೂಗು ಸೃಷ್ಠಿಯಾಗಿರುವ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಠಿಸಬೇಕೆಂದು ಯಾರು ಬೇಕಾದರೂ ಹೇಳಿಕೆ ನೀಡಬಹುದು. ಆದರೆ, ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಅದರ ಅವಶ್ಯಕತೆ ಇಲ್ಲ. ಹಾಗೊಂದು ವೇಳೆ ಹೈಕಮಾಂಡ್ ಮಾಡುವುದಾದರೆ ಮಾಡಲಿ, ಬೇಡ ಎನ್ನುವವರಾರು? ಎಂದರು.

ಕಾವೇರಿ ವಿವಾದ

ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದ ವಿವಾದ ಮತ್ತು ಹೋರಾಟಗಳು ಇಂದು ನಿನ್ನೆಯದಲ್ಲ. ಈಗಾಗಲೇ ಈ ಬಗ್ಗೆ ಜಲಸಂಪನ್ಮೂಲ ಸಚಿವರು ಸಮರ್ಪಕವಾಗಿಯೇ ಉತ್ತರಿಸಿದ್ದಾರೆ. ಹಲವಾರು ವರ್ಷಗಳಿಂದ ಜಲವಿವಾದ ಮುಂದುವರಿದರೆ ರಾಜ್ಯಗಳಿಗೆ ಸಮಸ್ಯೆಯಾಗುತ್ತಿದೆ. ಸಂಕಷ್ಟ ಪರಿಸ್ಥಿತಿಯಲ್ಲಿ ಬೇರೆ ರಾಜ್ಯಕ್ಕೆ ನೀರು ಕೊಡಬೇಕೆಂದರೆ ಆಗದು. ನಮ್ಮ ರಾಜ್ಯ ಕಾವೇರಿ, ಕೃಷ್ಣಾ, ಮಹಾದಾಯಿ ವಿಚಾರದಲ್ಲಿ ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ ರಾಜ್ಯಗಳಿಂದ ಸಮಸ್ಯೆ ಎದುರಿಸುತ್ತಿದೆ ಎಂದರು.

ಜಲ ವಿವಾದಗಳನ್ನು ಸುದೀರ್ಘ ಕಾಲ ಮುಂದುವರಿಸುವುದಕ್ಕಿಂತ ಪ್ರಧಾನಮಂತ್ರಿಗಳು ಮಧ್ಯಸ್ಥಿಕೆ ವಹಿಸಿ ಇತ್ಯರ್ಥಪಡಿಸಿದರೆ ರಾಜ್ಯವಾರು ಸಮಸ್ಯೆಯಾಗದು. ಈ ಹಿಂದೆ ಪ್ರಧಾನಮಂತ್ರಿಗಳು ನೀರಿನ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಿದ ಉದಾಹರಣೆಗಳಿವೆ. ಅದೇ ರೀತಿ ಕಾವೇರಿ ವಿಚಾರದಲ್ಲೂ ಪ್ರಧಾನಿಗಳು ಮಧ್ಯಸ್ಥಿಕೆ ವಹಿಸಿ ಬಗೆಹರಿಸಬೇಕೆಂದು ಶಿವಾನಂದ ಪಾಟೀಲ ತಿಳಿಸಿದರು.

ನಬಾರ್ಡ್‌ನಿಂದ ಹಣ ಕೊಡಿಸಲಿ

ಡಿಸಿಸಿ ಬ್ಯಾಂಕುಗಳು ರೈತರಿಗೆ ಅಲ್ಪಾವಧಿ ಬೆಳೆಸಾಲ ನೀಡಲು ಮಾರ್ಗಸೂಚಿಯನ್ವಯ ನಬಾರ್ಡ್‌ನಿಂದ ರಿಯಾಯ್ತಿ ಹಣಕಾಸನ್ನು ಕೇಂದ್ರ ಸರ್ಕಾರ ಆದಷ್ಟು ಬೇಗ ಕೊಡಿಸಬೇಕೆಂದು ಶಿವಾನಂದ ಪಾಟೀಲ ಆಗ್ರಹಿಸಿದರು.
ರೈತರಿಗೆ ಕೊಡುವ ಬೆಳೆಸಾಲದ ಮೊತ್ತದಲ್ಲಿ ಶೇ.40ರಷ್ಟನ್ನು ನಬಾರ್ಡ್ ರಿಯಾಯ್ತಿ ಹಣಕಾಸು ವ್ಯವಸ್ಥೆ ಕಲ್ಪಿಸುತ್ತದೆ. ಆದರೆ ಪ್ರಸಕ್ತ ಸಾಲಿನಲ್ಲಿ ಈವರೆಗೂ ನಬಾರ್ಡ್ ಹಣ ಬಂದಿಲ್ಲದೆ ದೇಶದ 357 ಡಿಸಿಸಿ ಬ್ಯಾಂಕ್‌ಗಳಿಗೆ ಸಮಸ್ಯೆಯಾಗಿದೆ. ರೈತರಿಗೆ ಸಂಪೂರ್ಣ ಬೆಳೆಸಾಲವನ್ನು ಡಿಸಿಸಿ ಬ್ಯಾಂಕ್‌ಗಳೇ ಕೊಡುವುದು ಕಷ್ಟಕರ. ವಿಜಯಪುರ ಡಿಸಿಸಿ ಬ್ಯಾಂಕ್ ಒಂದಕ್ಕೇ ನಬಾರ್ಡ್‌ನಿಂದ 580-600 ಕೋಟಿ ರೂ. ರಿಯಾಯ್ತಿ ಹಣ ಬಿಡುಗಡೆಯಾಗಬೇಕಿದೆ. ಹೀಗಾಗಿ ಕೇಂದ್ರ ಸರ್ಕಾರ ತುರ್ತಾಗಿ ನಬಾರ್ಡ್‌ನಿಂದ ಹಣ ಬಿಡುಗಡೆ ಮಾಡಿಸಬೇಕೆಂದು ಶಿವಾನಂದ ಪಾಟೀಲ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net