

ಉಡುಪಿ: ಜಿಲ್ಲಾಸ್ಪತ್ರೆಯ 11 ಡಯಾಲಿಸಿಸ್ ಯಂತ್ರಗಳಲ್ಲಿ 10 ಸ್ಥಗಿತಗೊಂಡಿವೆ, ಬೆಡ್ಗಳು ಖಾಲಿ ಇವೆ. ಒಂದು ತಿಂಗಳಿಂದ ರೋಗಿಗಳು ಖಾಸಗಿ ಆಸ್ಪತ್ರೆಗೆ ಹೋಗುತ್ತಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆ ಕಮಿಷನರ್ಗೆ ಮಾಹಿತಿ ಇಲ್ಲವಂತೆ. ಹಾಗಾದರೆ ರಾಜ್ಯ ಸರ್ಕಾರ ನಿದ್ದೆ ಮಾಡುತ್ತಿದೆಯೇ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿರುವ ಉಡುಪಿ ಜಿಲ್ಲಾಸ್ಪತ್ರೆಗೆ ಶಾಸಕ ಯಶ್ಪಾಲ್ ಸುವರ್ಣ ಅವರೊಂದಿಗೆ ಶನಿವಾರ ಮಧ್ಯಾಹ್ನ ಭೇಟಿ ನೀಡಿ ಪರಿಶೀಲಿಸಿದ ಅವರು, ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ಘಟಕಕ್ಕೆ ತೆರಳಿ ಅವ್ಯವಸ್ಥೆ ಕಂಡು ಅಸಮಾಧಾನ ವ್ಯಕ್ತಪಡಿಸಿದರು.
ಬಿಲ್ ಹಣ ಮರಳಿಸಿ: ರಾಜ್ಯದ ಎಲ್ಲ ಡಯಾಲಿಸಿಸ್ ಕೇಂದ್ರಗಳ ಪರಿಸ್ಥಿತಿ ಹಿಗೆಯೇ ಇದೆ. ಖಾಸಗಿಯಲ್ಲಿ ಡಯಾಲಿಸಿಸ್ ಮಾಡಿಸಿಕೊಂಡ ರೋಗಿಗಳ ಬಿಲ್ ಅನ್ನು ಸರ್ಕಾರ ವಾಪಸ್ ಕೊಡಬೇಕು. ಖಾಸಗಿ ವ್ಯಕ್ತಿಗಳು, ಶಾಸಕರು ಹಣ ಭರಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿರುವ ಕಿಡ್ನಿ ರೋಗಿಗಳ ಪರಿಸ್ಥಿತಿ ಏನಾಗಿದೆಯೋ ಗೊತ್ತಿಲ್ಲ. ಸಮಸ್ಯೆ ಗೊತ್ತಿದ್ದರೂ ರಾಜ್ಯ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಿಲ್ಲ ಏಕೆ? ರಾಜ್ಯ ಸರ್ಕಾರ ನಿದ್ದೆ ಮಾಡುತ್ತಿದೆಯಾ? ಬಡವರ ಗೋಳು ಕೇಳುತ್ತಿಲ್ಲವಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಸಂಧ್ಯಾ ರಮೇಶ್ ಹಾಗೂ ಇತರರು ಉಪಸ್ಥಿತರಿದ್ದರು.
ಮಾಹಿತಿ ಇಲ್ಲ ಎಂದ ಅಧಿಕಾರಿ!
ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಕೇಂದ್ರದ ಸಮಸ್ಯೆಗಳನ್ನು ಜಿಲ್ಲಾ ಸರ್ಜನ್ ಡಾ.ವೀಣಾ ಅವರಿಂದ ಸಚಿವೆ ಶೋಭಾ ಮಾಹಿತಿ ಪಡೆದರು. ಬಳಿಕ ರಾಜ್ಯ ಆರೋಗ್ಯ ಇಲಾಖೆ ಕಮಿಷನರ್ಗೆ ಮೊಬೈಲ್ ಕರೆಯ ಮೂಲಕ ಸಮಸ್ಯೆ ವಿವರಿಸಿದರು. ಆದರೆ, ಡಯಾಲಿಸಿಸ್ ಯಂತ್ರ ಸಂಪೂರ್ಣ ಸ್ಥಗಿತವಾಗಿರುವ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಅಧಿಕಾರಿ ಉತ್ತರಿಸಿದರು. ಇದರಿಂದಲೂ ಸಚಿವೆ ಶೋಭಾ ಇನ್ನಷ್ಟು ಗರಂ ಆದರು.
ನಾಲ್ಕೇ ತಿಂಗಳಲ್ಲಿ ಸರ್ಕಾರ ದಿವಾಳಿ
ಎಸ್ಕೆ ಸಂಜೀವಿನಿ ಎಂಬ ಸಂಸ್ಥೆ, ರಾಜ್ಯದ 122 ಕೇಂದ್ರದಲ್ಲಿ ತನ್ನ ಕಾರ್ಯವನ್ನು ಅಕ್ಟೋಬರ್ 1 ರಿಂದ ಸ್ಥಗಿತಗೊಳಿಸುವುದಾಗಿ ಸರ್ಕಾರಕ್ಕೆ ಪತ್ರ ಬರೆದಿತ್ತು. ಆದರೂ ಸರ್ಕಾರ ಗಮನ ಹರಿಸಿಲ್ಲ ಎಂದು ಶೋಭಾ ಹೇಳಿದರು. ಹೊಸ ಯಂತ್ರ ಕೊಡುವುದು ಹಾಗಿರಲಿ, ಹಾಳಾಗಿರುವ ಯಂತ್ರ ರಿಪೇರಿಯನ್ನೂ ಮಾಡಿಸಿಲ್ಲ. ಜಿಲ್ಲೆಯನ್ನೂ ಸೇರಿಸಿ ರಾಜ್ಯದಲ್ಲಿ ಆರೋಗ್ಯ ಸೇವೆ ಸರಿಯಾಗಿ ನಡೆಯುತ್ತಿಲ್ಲ. ಬಡವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ. ಅವರ ಬಿಲ್ ಭರಿಸುವವರು ಯಾರು? ರಾಜ್ಯದಲ್ಲಿರುವುದು ಬೇಜವಾಬ್ದಾರಿ ಸರ್ಕಾರ. ಅವರವರೇ ಕಿತ್ತಾಡುವುದರಲ್ಲಿ ತಲ್ಲೀನರಾಗಿದ್ದಾರೆ. ಕೈ ಸರ್ಕಾರ ನಾಲ್ಕೇ ತಿಂಗಳಲ್ಲಿ ದಿವಾಳಿಯಾಗಿದೆ ಎಂದು ಸಂಸದೆ ಟೀಕಿಸಿದರು.