

ಉಡುಪಿ: ದೇಶವನ್ನು ಅರವತ್ತು ವರ್ಷ ಲೂಟಿ ಮಾಡಿದವರು ಈಗ ಒಂದಾಗಿದ್ದಾರೆ. ಮಂಗಳವಾರದ ಸಭೆಗೆ ಬಂದವರು ಎಲ್ಲರೂ ಪ್ರಧಾನಿ ಅಭ್ಯರ್ಥಿಗಳಾಗಿದ್ದಾರೆ. ಕಳೆದ ಬಾರಿಯೂ ಇದೇ ರೀತಿ ಒಟ್ಟಾಗಿದ್ದರು. ತಮ್ಮ ಒಕ್ಕೂಟಕ್ಕೆ ಇಂಡಿಯಾ ಎಂಬ ಹೆಸರು ಇಟ್ಟುಕೊಂಡು ಹೊಸ ಈಸ್ಟ್ ಇಂಡಿಯಾ ಕಂಪನಿ ಶುರುವಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದ ಸಾರ್ವಭೌಮತೆಯನ್ನು ಇಡೀ ಪ್ರಪಂಚಕ್ಕೆ ಪಸರಿಸುತ್ತಿರುವ ಪ್ರಧಾನಿ ಮೋದಿ ವಿರುದ್ಧ ಒಟ್ಟಾಗಿದ್ದು, ಸಂವಿಧಾನ ವಿರೋಧಿ ಹೆಸರು ಇಟ್ಟುಕೊಂಡಿದ್ದಾರೆ. ದ ಆಂಬ್ಲಂಮ್ಸ್ ಅಂಡ್ ನೇಮ್ಸ್ ಪ್ರಿವೆನ್ಷನ್ ಆಫ್ ಇಂಪ್ರಾಪರ್ ಯೂಸ್ ಆಕ್ಟ್ ಪ್ರಕಾರ ಇಂಡಿಯಾ ಎನ್ನುವ ಹೆಸರನ್ನು ಯಾವುದೇ ಪಾರ್ಟಿ ಸಂಘಟನೆ ಸಂಸ್ಥೆಗೆ ಇಡುವಂತಿಲ್ಲ. ಇದು ಎನ್ ಡಿ ಎ ವರ್ಸಸ್ ಇಂಡಿಯಾ ಅಲ್ಲ, ಇದು ಭಾರತ ವರ್ಸಸ್ ಇಂಡಿಯಾ ಆಗಿದೆ. ಈಸ್ಟ್ ಇಂಡಿಯಾ ಕಂಪನಿಯನ್ನು ದೇಶವಾಸಿಗಳು ಓಡಿಸಿದ್ದರು. 2024ರಲ್ಲಿ ಮತ್ತೊಮ್ಮೆ ದೇಶದ ಗರಿಮೆಯನ್ನು ಎತ್ತಿ ಹಿಡಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಜಿತ್ ಪವರ್ ಕುಟುಂಬ ರಾಜಕಾರಣದಿಂದ ಬೇಸತ್ತು ಎನ್ ಡಿ ಎ ಸೇರಿದ್ದಾರೆ. ಅಜಿತ್ ಪವಾರ್ ಅವರೇ ಎನ್ ಸಿಪಿ ನಾಯಕ ಎಂದು ಎಲ್ಲರೂ ಹೇಳುತ್ತಿದ್ದರು. ಆದರೆ ಎನ್ ಸಿಪಿ ಅಧ್ಯಕ್ಷನ ಚುನಾವಣೆಯಲ್ಲಿ ಅವರನ್ನು ಗಣನೆಗೆ ತೆಗೆದುಕೊಂಡಿಲ್ಲ. ಕುಟುಂಬ ರಾಜಕಾರಣದಿಂದ ಬೇಸತ್ತು ಅವರು ಆಚೆ ಬಂದಿರಬಹುದು. ಅಜಿತ್ ಪವಾರ್ ಜೊತೆ ಬಿಜೆಪಿ ಗಟ್ಟಿಯಾಗಿ ನಿಲ್ಲುತ್ತದೆ. ದೇಶವನ್ನು ಗಟ್ಟಿಗೊಳಿಸುವ ಕಾರ್ಯದಲ್ಲಿ ಅವರು ಭಾಗಿಯಾಗಿದ್ದಾರೆ ಎಂದರು.
ರಾಜ್ಯದಲ್ಲಿ ಗ್ಯಾರಂಟಿ ಜಾರಿಯಿಂದಾಗಿ ಮೂರು ನಾಲ್ಕು ತಿಂಗಳಲ್ಲಿ ಕೆ ಎಸ್ ಆರ್ ಟಿ ಸಿ ನಿಗಮ ಸ್ಥಗಿತಕೊಳ್ಳುವ ಆತಂಕ ಇದೆ. ಕೆಎಸ್ಅರ್ಟಿಸಿಗೆ ಬಜೆಟ್ ನಲ್ಲಿ ಯಾವುದೇ ವಿಶೇಷ ಅನುದಾನ ಕೊಟ್ಟಿಲ್ಲ. 200 ಯೂನಿಟ್ ಉಚಿತ ವಿದ್ಯುತ್ ಇವತ್ತಿನ ತನಕ ಕಾರ್ಯರೂಪಕ್ಕೆ ಬಂದಿಲ್ಲ. ಭಾಗ್ಯಲಕ್ಷ್ಮಿ ಮತ್ತು ನಿರುದ್ಯೋಗಿ ಭತ್ತೆ, ಮುಂದೂಡುತ್ತಿದ್ದಾರೆ. ನೋಂದಣಿ ಪ್ರಕ್ರಿಯೆ ನಡೆಯುತ್ತಿರ ಬಹುದು. ಆದರೆ ಬಜೆಟ್ ನಲ್ಲಿ ಎಷ್ಟ್ಟು ಅನುದಾನ ಇಡಲಾಗಿದೆ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಎಲ್ಲಾ ಗ್ಯಾರೆಂಟಿ ವಿಚಾರದಲ್ಲಿ ಗೊಂದಲ ಕಾಡುತ್ತಿದೆ. ಕೇಂದ್ರ ಸರ್ಕಾರ ಕರೆದಿರುವ ಅಕ್ಕಿ ಟೆಂಡರ್ ನಲ್ಲಿ ಬಿಡ್ ಮಾಡುತ್ತಿಲ್ಲ. ಮೋದಿಯನ್ನು ದೂರುವ ಚಾಳಿ ಮಾತ್ರ ಮುಂದುವರೆಸಿದ್ದಾರೆ. ಗ್ಯಾರೆಂಟಿ ಜಾರಿಯಾದ ನಂತರ ಸಂಬಂಧಪಟ್ಟ ಇಲಾಖೆಯ ನಷ್ಟ್ಟ ಹೇಗೆ ತುಂಬಲಾಗುತ್ತದೆ ಎಂದು ಪ್ರಶ್ನಿಸಿದರು.
ತಪ್ಪಿತಸ್ಥರ ವಿರುದ್ಧ ಕ್ರಮ
ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿದ್ದ ಸಂದರ್ಭ ಬಂಡೆ ಸಿಕ್ಕಿದ್ದರಿಂದ ತಡೆಗೋಡೆ ನಿರ್ಮಾಣ ಕೆಲಸ ತಡವಾಗಿದೆ. ಈ ಬಗ್ಗೆ ದಿಶಾ ಸಮಿತಿ ಸಭೆಯಲ್ಲಿ ಪ್ರಸ್ತುತ ರಸ್ತೆ ಕುಸಿಯದಂತೆ ಮಾಡಲು ಮರಳು ಚೀಲ ತುಂಬುವಂತೆ ಸೂಚನೆ ನೀಡಲಾಗಿತ್ತು. ಅಲ್ಲಿ ಏನೇ ಸಮಸ್ಯೆಯಾದರೂ ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಗಮನಕ್ಕೆ ತರಲಾಗುವುದು ಎಂದು ಹೇಳಿದರು.