ಕರಾವಳಿಯಲ್ಲಿ ಕೇರಳ ಮಾದರಿ ಹತ್ಯೆ ಸಮಗ್ರ ತನಿಖೆಗೆ ಮನವಿ

udp-2-shobha
Published on

ಉಡುಪಿ: ಕರಾವಳಿಯಲ್ಲಿ ಕೇರಳ ಮಾದರಿಯಲ್ಲಿ ಒಂದೇ ಏಟಿಗೆ ತಲೆ ಮತ್ತು ಕುತ್ತಿಗೆ ಕಡಿದು ಕೊಲ್ಲುವ ಪ್ರವೃತ್ತಿ ಹೆಚ್ಚುತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಂಗಳವಾರ ಸಂಸತ್ ಭವನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಸಲ್ಲಿಸಿದರು.

ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು, ರುದ್ರೇಶ್, ಹರ್ಷ ಸಹಿತ ಅನೇಕ ಮಂದಿ ಕೊಲೆ ಒಂದೇ ರೀತಿಯಲ್ಲಿ ನಡೆದಿದೆ. ಈ ಹತ್ಯೆಗಳಿಗೆ ತರಬೇತಿ ಎಲ್ಲಿ ಸಿಗುತ್ತಿದೆ? ಇದರ ಹಿಂದೆ ಯಾರಿದ್ದಾರೆ? ಹಣಕಾಸಿನ ನೆರವು ಯಾರು ನೀಡುತ್ತಿದ್ದಾರೆ? ಇಂಥ ತಂಡಗಳಿಗೆ ಸ್ಥಳೀಯ ಮಾಹಿತಿದಾರರು ಯಾರು? ಈ ಎಲ್ಲಾ ಸಂಗತಿಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಪೊಲೀಸ್ ಜಾಲವನ್ನು ಬಲಪಡಿಸಬೇಕು. ಶೀಘ್ರದಲ್ಲಿ ಪ್ರವೀಣ್ ಕೊಲೆಗಾರರ ಬಂಧನ ಮಾಡಬೇಕು ಎಂದು ಮನವಿ ಮಾಡಿದರು.

ಎನ್‌ಐಎ ಕಚೇರಿ ಮೇಲ್ದರ್ಜೆಗೆ
ಭಯೋತ್ಪಾದನೆಯನ್ನು ತಡೆಗಟ್ಟಲು ಮತ್ತು ಮಂಗಳೂರಿನಲ್ಲಿ ತ್ವರಿತ ತನಿಖೆಯ ಬಗ್ಗೆ ನಿಗಾ ಇಡಲು ಬೆಂಗಳೂರಿನಲ್ಲಿರುವ ಎನ್‌ಐಎ ಕಚೇರಿಯನ್ನು ಮೇಲ್ದರ್ಜೆಗೆ ಏರಿಸಬೇಕು. ಕೇರಳಕ್ಕೆ ಹತ್ತಿರವಾಗಿರುವುದರಿಂದ ಮಂಗಳೂರು ಇಸ್ಲಾಮಿ ಜಿಹಾದಿಗಳ ಪ್ರಮುಖ ನೆಲೆಯಾಗಿ ಪರಿವರ್ತನೆಯಾಗುತ್ತಿದ್ದು, ಎನ್‌ಐಎ ವಿಭಾಗ ಕಚೇರಿ ತೆರೆಯಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net