

ಉಡುಪಿ: ಜಿಲ್ಲೆಯನ್ನು ಕ್ಷಯಮುಕ್ತವನ್ನಾಗಿಸಲು ಎಲ್ಲರ ಸಹಕಾರ ಅಗತ್ಯ. ವಿಶ್ವಕ್ಕೆ ಹೋಲಿಸಿದ್ದಲ್ಲಿ ಭಾರತ ದೇಶದಲ್ಲಿ ಅತೀ ಹೆಚ್ಚಿನ ಸಂಖ್ಯೆಯ ಕ್ಷಯರೋಗಿಗಳಿದ್ದು, ಕ್ಷಯರೋಗ ನಿಮೂರ್ಲನೆಗೆ ಕೇಂದ್ರ ಸರ್ಕಾರ ಉಚಿತ ಚಿಕಿತ್ಸೆ ನೀಡುತ್ತಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಬುಧವಾರ ನಗರದ ಅಜ್ಜರಕಾಡು ರೆಡ್ಕ್ರಾಸ್ ಭವನದ ಸಭಾಂಗಣದಲ್ಲಿ, ಭಾರತೀಯ ರೆಡ್ಕ್ರಾಸ್ ಸಂಸ್ಥೆ ಉಡುಪಿ, ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ, ಲಯನ್ಸ್ & ಲಿಯೋ ಪರ್ಕಳ ಹಾಗೂ ಅಪ್ಪು ಅಭಿಮಾನಿಗಳ ಬಳಗ ಆಶ್ರಯದಲ್ಲಿ ಕ್ಷಯರೋಗಿಗಳಿಗೆ ಪೌಷ್ಠಿಕ ಆಹಾರದ ಕಿಟ್ ವಿತರಣೆ ಹಾಗೂ ಕ್ಷಯರೋಗ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕೊರೋನಾ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಆರೋಗ್ಯದ ಸೌಲಭ್ಯಗಳಿಂದಾಗಿ ಕೇವಲ 11 ತಿಂಗಳಿನಲ್ಲಿ ದೇಶದ ವಿಜ್ಞಾನಿಗಳು, ವೈದ್ಯರುಗಳು ಕೋವಿಡ್ ಲಸಿಕೆಯನ್ನು ಕಂಡುಹಿಡಿದು ಸುಮಾರು 200 ಕೋಟಿ ಲಸಿಕೆಗಳನ್ನು ದೇಶಕ್ಕೆ ನೀಡಿದ್ದಾರೆ. ಸರ್ಕಾರದ ಹಲವು ನಿರ್ಧಾರಗಳಿಂದ ಕೊರೋನಾ ಸಂದರ್ಭದಲ್ಲಿ ಆಹಾರದ ಕೊರತೆ ಎದ್ದು ಕಾಣಲಿಲ್ಲ ಎಂದರು.
ಎಲ್ಲಾ ತರಹದ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗೆ ಬೇರೆ ದೇಶಗಳನ್ನು ಅವಲಂಭಿಸದೇ ನಮ್ಮ ದೇಶದಲ್ಲಿಯೇ ಆರೋಗ್ಯ ವ್ಯವಸ್ಥೆಯಲ್ಲಿ ಅದರಲ್ಲೂ ಮೂಲಭೂತ ಸೌಕರ್ಯದಲ್ಲಿ ಸುಧಾರಣೆ ಆಗಬೇಕು. ಇದರೊಂದಿಗೆ ತಜ್ಞ ವೈದ್ಯರುಗಳ ಸಂಖ್ಯೆ ಹೆಚ್ಚಾಗಬೇಕು ಎಂದರು.
ಉಡುಪಿ ನಗರದಲ್ಲಿ 48 ಜನ ಕ್ಷಯರೋಗಿಗಳಿದ್ದು, ಅವರಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವ 25 ಜನರಿಗೆ ಆರು ತಿಂಗಳವರೆಗೆ ಆಹಾರದ ಕಿಟ್ ಅನ್ನು ನೀಡುವ ಮೂಲಕ ಉಡುಪಿ ನಗರವನ್ನು ಕ್ಷಯರೋಗ ಮುಕ್ತ ಮಾಡಲು ಪ್ರಯತ್ನಿಸಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಯಶ್ಪಾಲ್ ಎ ಸುವರ್ಣ ಮಾತನಾಡಿ, ಯಾವುದೇ ವ್ಯಕ್ತಿ ಕನಸು ನನಸಾಗಿಸಲು ಮೊದಲು ಆರೋಗ್ಯವಂತರಾಗಿರಬೇಕು. ಜಿಲ್ಲೆಯಾದ್ಯಂತ ಕ್ಷಯ ರೋಗಿಗಳನ್ನು ಹಾಗೂ ಇತರೆ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳನ್ನು ಗುರುತಿಸಿ, ಅವರಿಗೆ ಆರೋಗ್ಯ ಸೇವೆಗಳನ್ನು ಮನೆಬಾಗಿಲಿಗೆ ತಲುಪಿಸುವ ಕೆಲಸವಾಗಬೇಕು ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ, ನಗರಸಭಾ ಸದಸ್ಯರಾದ ಟಿ.ಜಿ. ಹೆಗಡೆ, ಪ್ರಭಾಕರ ಪೂಜಾರಿ, ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಶೋಕ್ ಶೆಟ್ಟಿಗಾರ್, ರೆಡ್ಕ್ರಾಸ್ ಸಂಸ್ಥೆಯ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ, ಪರ್ಕಳ ಲಯನ್ಸ್ & ಲಿಯೋ ಕ್ಲಬ್ನ ಸ್ವಪ್ನ ಸುರೇಶ್, ಆಶಾಕಾರ್ಯಕರ್ತೆಯರು, ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು, ರೆಡ್ಕ್ರಾಸ್ ಸಂಸ್ಥೆಯ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ನಗರಸಭಾ ಸದಸ್ಯ ವಿಜಯ್ ಕೊಡವೂರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.