

ಉಡುಪಿ: ದೇಶದಲ್ಲಿ ಯಾವುದೇ ಭಾಗದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆದರೆ ಅದಕ್ಕೆ ಅಂತಾರಾಷ್ಟ್ರೀಯ ಬೆಂಬಲ ಸಿಗುತ್ತದೆ. ಜಾರ್ಜ್ ಸೊರಸ್ ಅಂತವರು ಭಾರತವನ್ನು ಅಸ್ಥಿರ ಮಾಡಲು ಪ್ರಯತ್ನಿಸುತ್ತಿದ್ದಾರೆ. ಯಾರೇ ದೇಶದಲ್ಲಿ ಪ್ರತಿಭಟನೆ ಮಾಡಿದರೂ ಅವರಿಗೆ ಫಂಡಿಂಗ್ ಮಾಡುತ್ತಾರೆ. ಸರ್ಕಾರದ ವಿರುದ್ಧ ಜನರನ್ನು ಎತ್ತಿಕಟ್ಟುವ ಪ್ರಯತ್ನ ನಡೆಯುತ್ತಿದೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಸ್ತಿಪಟುಗಳ ಆರೋಪದ ಬಗ್ಗೆ ತನಿಖೆ ನಡೆದು, ತಪ್ಪಾಗಿದ್ದರೆ ಶಿಕ್ಷೆ ಆಗಬೇಕು. ನಾವು ಯಾರನ್ನು ಬೆಂಬಲಿಸುತ್ತಿಲ್ಲ. ಕ್ರೀಡಾ ಸಚಿವ ಅನುರಾಗ್ ಠಾಕೂರ್ ತನಿಖೆ ಮಾಡಿಸುತ್ತಿದ್ದಾರೆ. ನಿಜವಾದ ಮಾಹಿತಿ ಕಲೆ ಹಾಕಬೇಕು. ಹೀಗಾಗಿ ಸಂಬಂಧಪಟ್ಟ ಕ್ರೀಡಾ ಇಲಾಖೆ ಎಲ್ಲವನ್ನೂ ಪರಿಶೀಲನೆ ಮಾಡುತ್ತಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ ಟೆಂಡರ್‌ಗಳಿಗೆ ತಡೆ ನೀಡಿ ಮೌಖಿಕ ಆದೇಶ ಹೊರಡಿಸಿರುವುದರಿಂದ ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಗಳ ಕಾಮಗಾರಿಯೂ ಸ್ಥಗಿತಗೊಂಡಿದೆ. ಹೀಗಾಗಿ ಜಲ ಜೀವನ್ ಮಿಷನ್ ಮುಂತಾದ ಕೇಂದ್ರ ಸರ್ಕಾರದ ಯೋಜನೆಗಳನ್ನು ಈ ಆದೇಶದಿಂದ ಹೊರಗಿಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಆಂಧ್ರ ಸರ್ಕಾರ ಹಲವು ಉಚಿತ ಕೊಟ್ಟಿತ್ತು. ಈಗ ಅಲ್ಲಿ ನೌಕರರಿಗೆ ಸಂಬಳ ಕೊಡಲೂ ದುಡ್ಡಿಲ್ಲ, ಆಂಧ್ರಪ್ರದೇಶ ಈಗ ಮುಳುಗುವ ಪರಿಸ್ಥಿತಿ ಬಂದಿದೆ. ಕರ್ನಾಟಕದಲ್ಲಿ ಗ್ಯಾರೆಂಟಿ ಯೋಜನೆಗಳಿಗೆ ಹಣಕಾಸು ಎಲ್ಲಿಂದ ಒದಗಿಸುತ್ತಾರೆ ಎಂಬ ಬಗ್ಗೆ ವರದಿ ಕೊಡಬೇಕು. ಕರ್ನಾಟಕ ಆ ಪರಿಸ್ಥಿತಿಗೆ ಹೋಗಬಾರದು. ಹೀಗಾಗಿ ನಾವೆಲ್ಲ ಚಿಂತಿಸಬೇಕಿದೆ. ಲೋಕಸಭಾ ಚುನಾವಣೆಗೆ ಮೇಲೆ ಗ್ಯಾರೆಂಟಿ ಎಫೆಕ್ಟ್ ಆಗಲ್ಲ. ಜನರು ವಿದ್ಯಾವಂತ, ಬುದ್ಧಿವಂತ, ದೇಶಪ್ರೇಮಿಗಳು ಎಂದರು.
ಕೊಂಕಣ ರೈಲ್ವೇ ವಿಲೀನಕ್ಕೆ ಮನವಿ
ಕೊಂಜಣ ರೈಲ್ವೇ ಅನೇಕ ವರ್ಷಗಳಿಂದ ನಷ್ಟದಲ್ಲಿದೆ. ಹೀಗಾಗಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಈ ವಿಭಾಗದ ಆಡಳಿತವನ್ನು ರೈಲ್ವೇ ಇಲಾಖೆ ನೇರವಾಗಿ ವಹಿಸಿಕೊಳ್ಳುವಂತೆ ಕೇಂದ್ರ ರೈಲ್ವೇ ಸಚಿವರಿಗೆ ಮನವಿ ಮಾಡಿದ್ದೇನೆ. ಇಂದ್ರಾಳಿ ರೈಲ್ವೇ ಬ್ರಿಡ್ಜ್‌ಗೆ ಬೇಕಾದ ಕಬ್ಬಿಣದ ಭೀಮ್‌ಗಳನ್ನು ಹುಬ್ಬಳ್ಳಿಯಲ್ಲಿ ತಯಾರಿಸಲಾಗುತ್ತಿದ್ದು, ನಂತರ ಇಲ್ಲಿಗೆ ತಂದು ಜೋಡಿಸಲಾಗುತ್ತದೆ. ಈ ಕಾಮಗಾರಿ ಡಿಸೆಂಬರೊಳಗೆ ಪೂರ್ಣಗೊಳ್ಳಲಿದೆ ಎಂದರು.
ಹಲವು ವರ್ಷಗಳ ನಂತರ ದೇಶದಲ್ಲಿ ರೈಲು ದುರ್ಘಟನೆ ನಡೆದಿದೆ. ಅಪಘಾತವಾದ ರೈಲುಗಳ ತೆರವು ಕಾರ್ಯದ ನಂತರ ಸ್ಪಷ್ಟ ಚಿತ್ರಣ ಸಿಗಲಿದೆ. ಅಪಘಾತಕ್ಕೆ ಕಾರಣ ಏನು ಎಂಬುದು ಬಯಲಾಗಬೇಕು. ತಾಂತ್ರಿಕ ದೋಷ ಕಾರಣವೋ? ಬೇರೆ ಏನಾದರೂ ಕಾರಣ ಇದೆಯೋ ತನಿಖೆಯಾಗಬೇಕು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈಗಾಗಲೇ ತನಿಖೆಯನ್ನು ಪ್ರಾರಂಭ ಮಾಡಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ನಿಕಟಪೂರ್ವ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಶಾಸಕರಾದ ಯಶ್ಪಾಲ್ ಎ. ಸುವರ್ಣ, ಸುರೇಶ್ ಶೆಟ್ಟಿ ಗುರ್ಮೆ, ಕಿರಣ್ ಕುಮಾರ್ ಕೊಡ್ಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಕಾರ್ಯದರ್ಶಿ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಉಪಸ್ಥಿತರಿದ್ದರು.