

ಬೆಂಗಳೂರು: ಕೇಂದ್ರ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರದ ಸಹಕಾರ ಅಗತ್ಯವಾಗಿದ್ದು, ಇದರಲ್ಲಿ ಯಾವುದೇ ರಾಜಕೀಯ ಮಾಡಬಾರದು ಎಂದು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಆಯೋಜಿಸಲಾದ ಪ್ರಧಾನಮಂತ್ರಿ ವಿಶ್ವಕರ್ಮ ವಸ್ತು ಪ್ರದರ್ಶನ ಮತ್ತು ವ್ಯಾಪಾರ ಮೇಳ ಉದ್ಘಾಟಿಸಿ ಮಾತನಾಡಿದರು.
ಪಾರಂಪರಿಕವಾಗಿ ನಡೆಸಿಕೊಂಡು ಬಂದಿರುವ ಕುಲಕಸುಬುಗಳನ್ನು ಗುರುತಿಸಿ ಅವರಿಗೆ ಸರ್ಟಿಫಿಕೇಟ್‌ನೊಂದಿಗೆ ಅಗತ್ಯ ಕೌಶಲ್ಯ ತರಬೇತಿ ನೀಡಿ, ಅಂತರಾಷ್ಟ್ರೀಯ ಗುಣಮಟ್ಟದ ಉತ್ಪನ್ನಗಳ ಉತ್ಪಾದನೆಗೆ ಪ್ರೋತ್ಸಾಹಿಸಲು ಪ್ರಧಾನಿ ನರೇಂದ್ರ ಮೋದಿಯವರು ಪಿಎಂ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಯ ಅಡಿಯಲ್ಲಿ ಎಂಎಸ್‌ಎಂಇ ರಾಜ್ಯದಲ್ಲಿ ಮೊದಲ ಬಾರಿಗೆ ಮೇಳವನ್ನು ಆಯೋಜಿಸಿದೆ. ಆದರೆ ಈ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರದ ಅಧಿಕಾರಿಗಳು ಯಾರೂ ಬಂದಿಲ್ಲ ಎಂದು ಅವರ ಅಸಮಾಧಾನ ಹೊರ ಹಾಕಿದರು.
ದಕ್ಷಿಣ ಭಾರತದಲ್ಲಿ ಎಲ್ಲೂ ಇಲ್ಲದಿರುವ ಎನ್‌ಎಸ್‌ಐಸಿ ತರಭೇತಿ ಸಂಸ್ಥೆಯನ್ನು ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿಸಲು ಸೂಚನೆ ನೀಡಲಾಗಿದೆ. ಜೊತೆಗೆ ಬೆಂಗಳೂರಿನ ವಿಶ್ವನೀಡಂ ಸಮೀಪ ಮೆಟ್ರೋಲಾಜಿಕಲ್ ಡಾಪ್ಲರ್ (ಮಳೆಮಾಪನ ಕೇಂದ್ರ) ಸ್ಥಾಪನೆಗೆ ಅಗತ್ಯ ಭೂಮಿ ಮಂಜೂರು ಮಾಡುವಂತೆ ರಾಜ್ಯ ಸರ್ಕಾರವನ್ನು ಶೋಭಾ ಕರಂದ್ಲಾಜೆ ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಎಂಎಸ್‌ಎಂಇ ಡಿಎಫ್‌ಒ ಡಾ. ಕೆ. ಸಾಕ್ರಟೀಸ್, ಕಾಸಿಯಾ ಅಧ್ಯಕ್ಷ ಎಂ. ಜಿ. ರಾಜಗೋಪಾಲ್, ಅವೇಕ್ ಅಧ್ಯಕ್ಷ ಆಶಾ, ಪೀಣ್ಯ ಇಂಡಸ್ಟ್ರಿ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್ ಮತ್ತಿತರರಿದ್ದರು.
ಪಿಎಂ ವಿಶ್ವಕರ್ಮ ಯೋಜನೆಯು ಒಂದು ಜಾತಿಗೆ ಸೀಮಿತವಾದುದ್ದಲ್ಲ. ಬದಲಿಗೆ ಎಲ್ಲ ಜಾತಿಯ ಜನರು ಎಲ್ಲ ಕಸುಬುಗಳನ್ನು ಪಾರಂಪರಿಕವಾಗಿ ಮಾಡುತ್ತಾ ಬಂದಿದ್ದಾರೆ. ಅಂತಹ ಎಲ್ಲರಿಗೂ ಈ ಯೋಜನೆಗೆ ಅರ್ಹರು.
ವಿಶ್ವಕರ್ಮ ಯೋಜನೆಯಡಿ ಶಿಲ್ಪಿಗಳು ಮತ್ತು ಸಾಂಪ್ರದಾಯಿಕ ವೃತ್ತಿಪರರಿಗೆ ತಂತ್ರಜ್ಞಾನ, ವಾಣಿಜ್ಯೀಕರಣ ಮತ್ತು ತರಬೇತಿ ಜೊತೆಗೆ ಆರ್ಥಿಕ ನೆರವು ಮತ್ತು ಸಾಲ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.
ವಿಶ್ವಕರ್ಮ ಯೋಜನೆಗೆ ಈ ವರೆಗೆ ದೇಶದ 20 ಲಕ್ಷ ಜನ ಆಯ್ಕೆಯಾಗಿದ್ದು ಕರ್ನಾಟಕದಿಂದ ಸಲ್ಲಿಕೆಯಾದ 29 ಲಕ್ಷ ಅರ್ಜಿಗಳಲ್ಲಿ 4 ಲಕ್ಷ ಅರ್ಜಿಗಳು ಆಯ್ಕೆಯಾಗಿವೆ. ಶಿಘ್ರದಲ್ಲೇ ಪ್ರಧಾನಿ ಮೋದಿ ಲಾನುಭವಿಗಳಿಗೆ ಸರ್ಟಿಫಿಕೇಟ್ ವಿತರಿಸಲಿದ್ದಾರೆ. ಜೊತೆಗೆ ಅಗತ್ಯ ಟೂಲ್ ಕಿಟ್ ಹಾಗೂ ಸಹಾಯ ಧನವೂ ದೊರೆಯಲಿದೆ.
ಮೇಳದಲ್ಲಿ 18 ಕಸುಬುಗಳ 70ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದ್ದು, ನೂರಕ್ಕೂ ಹೆಚ್ಚು ಕಲೆಗಾರರು, ಶಿಲ್ಪಿಗಳು ಮತ್ತು ಸಾಂಪ್ರದಾಯಿಕ ಕೈಗಾರಿಕೆಗಳಲ್ಲಿ ತೊಡಗಿರುವ ವೃತ್ತಿಪರರು ಪಾಲ್ಗೊಂಡಿದ್ದಾರೆ.
ವಿಭಿನ್ನ ಕಲಾತ್ಮಕ ಹಾಗೂ ಸಾಂಪ್ರದಾಯಿಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟ, ಸರ್ಕಾರದ ನೂತನ ಯೋಜನೆಗಳ ಪರಿಚಯ, ಕಲೆ ಮತ್ತು ವೃತ್ತಿ ಅಭಿವೃದ್ಧಿಗೆ ಸಂಬಂಧಿಸಿದ ಮಾರ್ಗದರ್ಶನ ಈ ಮೇಳದ ಉದ್ದೇಶವಾಗಿದ್ದು, ರಾಜಾಜಿನಗರದ ಎಂಎಸ್‌ಎಂಇ ಆವರಣದಲ್ಲಿ ಸೆ.14ರವರೆಗೆ ಮೇಳ ನಡೆಯಲಿದೆ.