

ಉಡುಪಿ: ಚೈತ್ರಾ ಕುಂದಾಪುರ ಬಿಜೆಪಿಯ ರಾಜ್ಯ ಹಾಗೂ ಕೇಂದ್ರ ನಾಯಕರ ಹೆಸರನ್ನು ದುರುಪಯೋಗ ಮಾಡಿದ ವಿಚಾರದಲ್ಲಿ ತನಿಖೆಯಾಗಬೇಕು. ಇದಕ್ಕೆ ಕುಮ್ಮಕ್ಕು ನೀಡಿದವರ ಬಗ್ಗೆಯೂ ತನಿಖೆ ನಡೆಯಬೇಕು. ದುಡ್ಡು ತೆಗೆದುಕೊಂಡು ಟಿಕೆಟ್ ನೀಡುವ ಸ್ಥಿತಿ ಬಿಜೆಪಿಗೆ ಬಂದಿಲ್ಲ. ಮುಂದೆ ಬರುವುದೂ ಇಲ್ಲ. ಕಾಸು ಕೊಟ್ಟು ಟಿಕೆಟ್ ಪಡೆಯುವ ಸಂಪ್ರದಾಯ ಬಿಜೆಪಿಯಲ್ಲಿ ಇಲ್ಲ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೈತ್ರ ಕುಂದಾಪುರ ಅರೆಸ್ಟ್ ಆಗಿರುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ನನಗೆ ವೈಯಕ್ತಿಕ ಸಂಪರ್ಕ ಇರಲಿಲ್ಲ. ಕಾರ್ಯಕ್ರಮಗಳಲ್ಲಿ ಸಿಕ್ಕಾಗ ಫೋಟೋ ತೆಗೆದಿರಬಹುದು. ನನ್ನ ಜೊತೆ ನೂರಾರು ಮಂದಿ ಫೋಟೋ ತೆಗೆದುಕೊಳ್ಳುತ್ತಾರೆ. ಹಾಗೆ ಚೈತ್ರಾ ಫೋಟೋ ತೆಗೆದುಕೊಂಡಿರಬಹುದು. ಅವಳು ನನಗೆ ಅಥವಾ ನಾನು ಅವಳಿಗೆ ಫೋನ್ ಮಾಡಿದ್ದಿಲ್ಲ. ಸಾಮಾಜಿಕ ಜೀವನದಲ್ಲಿ ಯಾರೇ ತಪ್ಪು ಮಾಡಿದರೂ ಶಿಕ್ಷೆ ಆಗಬೇಕು. ಉಪ್ಪು ತಿಂದವರು ನೀರು ಕುಡಿಯುತ್ತಾರೆ. ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆಯಾಗಬೇಕು. ತಪ್ಪು ಮಾಡದೆ ಇದ್ದರೆ ಅನಾವಶ್ಯಕವಾಗಿ ತೊಂದರೆ ಕೊಡುವುದು ಬೇಡ. ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ಯಾಗಬೇಕು ಎಂದು ಆಗ್ರಹಿಸಿದರು.
ಮುಂದಿನ ಚುನಾವಣೆಯಲ್ಲಿ ಉಡುಪಿ&ಚಿಕ್ಕಮಂಗಳೂರು ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಕೊಡಬೇಕು ಎಂಬುದನ್ನು ವರಿಷ್ಠ್ಠರು ತೀಮಾರ್ನಿಸುತ್ತಾರೆ. ಬಿಜೆಪಿಗೆ ಗಟ್ಟಿಮುಟ್ಟಾದ ನೇತೃತ್ವ ಇದೆ. ನರೇಂದ್ರ ಮೋದಿ, ಅಮಿತ್ ಶಾ, ನಡ್ದ ಲೋಕಸಭೆಗೆ ಯಾರಿಗೆ ಟಿಕೆಟ್ ನೀಡಬೇಕು ಅಂತ ತೀಮಾರ್ನ ಮಾಡುತ್ತಾರೆ. ಸ್ಪರ್ಧೆ ಮಾಡುತ್ತೇನೆ. ಟಿಕೆಟ್ ಸಿಗುತ್ತದೆ ಅಂತ ಯಾರು ಹೇಳಿಕೊಂಡರೂ ಅದಕ್ಕೆ ಬೆಲೆ ಇರುವುದಿಲ್ಲ. ನನ್ನ ಹೆಸರನ್ನು ದುರುಪಯೋಗ ಮಾಡಿಕೊಂಡರೆ ಕ್ರಮ ಕೈಗೊಳ್ಳಬೇಕು ಎಂದರು.
ಕರ್ನಾಟಕದಲ್ಲಿ ಜೆಡಿಎಸ್ಗೂ ಸ್ವಾಗತ
ನರೇಂದ್ರ ಮೋದಿಯವರ ದೂರದೃಷ್ಟಿಯ ಯೋಜನೆಗಳನ್ನು ಬೆಂಬಲಿಸಿ ಎನ್ ಡಿ ಎ ಮೈತ್ರಿಕೂಟಕ್ಕೆ ಯಾರು ಸೇರ್ಪಡೆಯಾದರೂ ಅವರನ್ನು ಸ್ವಾಗತಿಸುತ್ತೇವೆ. ಎಲ್ಲರನ್ನೂ ಒಟ್ಟಿಗೆ ವಿಶ್ವಾಸದಿಂದ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇವೆ. ಕಾಲ ಬಹಳಷ್ಟು ಮುಂದೆ ಹೋಗಿದೆ. ಹೀಗಾಗಿ ಕರ್ನಾಟಕದಲ್ಲಿ ಜೆಡಿಎಸ್ಗೂ ಸ್ವಾಗತ. ದೇಶದ ಉನ್ನತಿಗೆ ಪ್ರತಿಯೊಬ್ಬರನ್ನು ಒಗ್ಗಟ್ಟಾಗುವ ಕಾಲಟ್ಟದಲ್ಲಿದ್ದೇವೆ. ಹಳೆ ಕಹಿ ಮರೆತು ಜೊತೆಗೆ ಹೋಗಲು ಸಿದ್ಧರಿದ್ದೇವೆ ಎಂದು ಹೇಳಿದರು.
ಬರಪರಿಹಾರಕ್ಕೆ ನೆರವು
ಕರ್ನಾಟಕದಲ್ಲಿ ಬರಗಾಲದ ಛಾಯೆ ಇದೆ. ಬಹಳಷ್ಟು ರಾಜ್ಯದಲ್ಲಿ ಮಳೆ ಕೊರತೆ ಆಗಿದೆ. ರಾಜ್ಯ ಸರ್ಕಾರ ಬರಗಾಲ ಪೀಡಿತ ಪ್ರದೇಶಗಳ ಘೋಷಣೆ ಮಾಡಿದರೆ ಕೇಂದ್ರ ಎನ್ ಡಿ ಅರ್ ಎ್ ಮೂಲಕ ಹಣ ಕೊಡಲಿದೆ. ಮೋದಿ ಸರ್ಕಾರ ಯಾವುದೇ ರಾಜ್ಯಗಳ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿಲ್ಲ. ಕೇಂದ್ರ ಸರ್ಕಾರ ಹಾಗೂ ಕೃಷಿ ಇಲಾಖೆ ಯಾವುದೇ ರೀತಿಯ ನೆರವು ನೀಡಲು ಸಿದ್ಧವಿದೆ ಎಂದು ಹೇಳಿದರು.