ಖರ್ಗೆ ಮಾತು ಕಾಂಗ್ರೆಸ್ ಮಾನಸಿಕತೆ: ಸಚಿವೆ ಶೋಭಾ ಕರಂದ್ಲಾಜೆ

udp-29-shobha
Published on

ಉಡುಪಿ: ಕಾಂಗ್ರೆಸ್‌ಗೆ ಅಜೆಂಡಾ ಇಲ್ಲ. ಅಭಿವೃದ್ಧಿ ಆಧಾರದಲ್ಲಿ ಓಟು ಕೇಳಲು ಆಗುತ್ತಿಲ್ಲ. ಹೀಗಾಗಿ ಬಿಜೆಪಿ ಬಗ್ಗೆ ಕೇವಲ ಆರೋಪ ಮಾಡುತ್ತಿದೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಹೇಳಿಕೆಯಿಂದ ಕಾಂಗ್ರೆಸ್ ಮಾನಸಿಕತೆ ಅರ್ಥವಾಗುತ್ತದೆ ಎಂದು ಕೇಂದ್ರ ರೈತ ಕಲ್ಯಾಣ ಮತ್ತು ಕೃಷಿ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಕುರ್ಚಿ ನೆಹರೂ ಕುಟುಂಬಕ್ಕೆ ಮಾತ್ರ ಸೀಮಿತ ಎಂಬ ಭಾವನೆ ಕಾಂಗ್ರೆಸ್‌ನಲ್ಲಿದೆ. ಬೇರೆಯವರು ಕುಳಿತುಕೊಂಡಿರುವುದರಿಂದ ವಿಲವಲ ಒದ್ದಾಡುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ವಕ್ತಾರ ಮೋದಿಯವರಿಗೆ ಹೊಂಡ ತೋಡುತ್ತೀವಿ ಎಂದು ಹೇಳುತ್ತಾರೆ. ಇದೆಲ್ಲವನ್ನೂ ಸಹಿಸಿಕೊಂಡು ಪ್ರಧಾನಿ ದೇಶಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಯತ್ನಾಳ್ ಮಾತು ಸರಿಯಲ್ಲ
ಸೋನಿಯಾಗಾಂದಿ ಬಗ್ಗೆ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿರುವ ಮಾತು ಸರಿಯಲ್ಲ. ಕಾಂಗ್ರೆಸ್ ಪ್ರಧಾನಿಯವರನ್ನು ಪದೇ ಪದೇ ನಿಂದಿಸುವುದರಿಂದ ಮನನೊಂದು ಅವರು ಈ ರೀತಿ ಹೇಳಿಕೆ ನೀಡಿದ್ದಾರೆ. ಆದರೆ ಇದು ಬಿಜೆಪಿ ಸಂಸ್ಕೃತಿಯಲ್ಲ. ಈ ಬಗ್ಗೆ ಯತ್ನಾಳ್ ಜೊತೆಗೆ ಮಾತನಾಡುತ್ತೇವೆ ಎಂದರು.

ಡಬಲ್ ಇಂಜಿನ್ ಅಗತ್ಯ
ಕೇಂದ್ರ ಸರ್ಕಾರದ ಯೋಜನೆಗಳು ರಾಜ್ಯದಲ್ಲಿ ಸಮರ್ಪಕವಾಗಿ ಜಾರಿಗೊಳಿಸಲು ಡಬಲ್ ಇಂಜಿನ್ ಸರ್ಕಾರ ಅತೀ ಅಗತ್ಯ. 2018ರಲ್ಲಿ ಕಿಸಾನ್ ಸಮ್ಮಾನ್ ಯೋಜನೆಗೆ ಅಂದಿನ ಕಾಂಗ್ರೆಸ್ ಮತ್ತು ಜೆಡಿಎಸ್ ಕೇವಲ 17 ಮಂದಿ ರೈತರ ಹೆಸರನ್ನು  ಕೇಂದ್ರಕ್ಕೆ ಸಲ್ಲಿಸಿತ್ತು. ಬಿಜೆಪಿ ಸರ್ಕಾರ ಬಂದ ಬಳಿಕ 54 ಲಕ್ಷ ರೈತರ ಖಾತೆಗೆ ಡಿಬಿಟಿ ಮೂಲಕ ಹಣ ನೀಡಲಾಗುತ್ತಿದೆ. 2008 ಮತ್ತು 2018ರಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಬಂದಿಲ್ಲ. ಇದರ ಪರಿಣಾಮ ಬೇರೆ ಪಕ್ಷದಿಂದ ಬಂದವರವನ್ನು ಸೇರಿಸಿಕೊಂಡು ಸರ್ಕಾರ ರಚಿಸಬೇಕಾಯಿತು. ಈ ಬಾರಿ ಜನತೆ ಪೂರ್ಣ ಬಹುಮತ ಸಿಗಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸಕಾರ್ರ್ದ ಫಲಾನುಭವಿಗಳನ್ನು ಭೇಟಿ ಮಾಡಿ ಪಕ್ಷಕ್ಕೆ ಮತ ನೀಡುವಂತೆ ಮನವೊಲಿಸಬೇಕು ಎಂಬುದು ಮೋದಿ ಅಪೇಕ್ಷೆಯಾಗಿದೆ ಎಂದರು.

ಮತಗಟ್ಟೆ ಮಾಹಿತಿ ಸಂಗ್ರಹ ಸಹಜ ಪ್ರಕ್ರಿಯೆ
ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳ ಮಾಹಿತಿ ಸಂಗ್ರಹಿಸಿ ಚುನಾವಣಾ ಆಯೋಗಕ್ಕೆ ಸಲ್ಲಿಸುವುದು ಪ್ರತೀ ಚುನಾವಣೆಯಲ್ಲಿಯೂ ನಡೆಯುತ್ತಿರುವ ಸಹಜ ಪ್ರಕ್ರಿಯೆ. ಇದರಲ್ಲಿ ವಿಶೇಷತೆ ಇಲ್ಲ. ಕೆಲವು ಪ್ರದೇಶಗಳಲ್ಲಿ ಜನರು ಮತಗಟ್ಟೆಗೆ ಬರದಂತೆ ತಡೆಯಲಾಗುತ್ತದೆ.  ಅಂಥ ಕಡೆ ಹೆಚ್ಚಿನ ಪೊಲೀಸ್ ಬಲ ನಿಯೋಜಿಸುವಂತೆ ಚುನಾವಣೆ ಆಯೋಗಕ್ಕೆ ಮನವಿ ನೀಡಲಾಗುತ್ತದೆ. ಸರ್ವ ಪಕ್ಷ ಸಭೆಯಲ್ಲಿ ಇಂಥ ಮತಗಟ್ಟೆಗಳ ಮಾಹಿತಿ ನೀಡುವಂತೆ ಆಯೋಗವೇ ಸೂಚನೆ ನೀಡಿದೆ ಎಂದು ಅವರು ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್, ಶಾಸಕ ರಘುಪತಿ ಭಟ್, ಬಿಜೆಪಿ ಅಭ್ಯರ್ಥಿ ಯಶ್‌ಪಾಲ್ ಸುವರ್ಣ, ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಾಧ್ಯಕ್ಷ ಮಹೇಶ್ ಠಾಕೂರು, ವಕ್ತಾರ ರಾಘವೇಂದ್ರ ಕಿಣಿ, ಪ್ರಧಾನ ಕಾರ್ಯದರ್ಶಿ ನವೀನ್ ಶೆಟ್ಟಿ ಕುತ್ಯಾರು ಉಪಸ್ಥಿತರಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net