

ಮೈಸೂರು: ಚುನಾವಣೆ ಹತ್ತಿರ ಬಂದಾಗ ಮಾತ್ರ ಬಿಜೆಪಿಯವರಿಗೆ ಹಿಂದುಗಳು ನೆನಪಾಗುತ್ತಾರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಹತ್ಯೆಗಳು ನಡೆದಿಲ್ಲವೇ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರನ್ನು ಹಿಂದುಗಳೇ ಕಾರು ಇಳಿಸಿ ಓಡಿಸಿದ್ದರು. ಲೋಕಸಭಾ ಚುನಾವಣೆಗೆ ಒಂದು ವರ್ಷ ಬಾಕಿ ಇದ್ದು, ಇದೀಗ ಅವರಿಗೆ ಪಾಕಿಸ್ತಾನ, ಮುಸ್ಲಿಂ, ಗಣೇಶ, ಮಸೀದಿ, ಆಂಜನೇಯ ನೆನಪಾಗುತ್ತಿದ್ದು, ಇದೆಲ್ಲವೂ ಚುನಾವಣಾ ಗಿಮಿಕ್. ವಿಧಾನಸಭಾ ಚುನಾವಣೆಯಂತೆ ಲೋಕಸಭೆ ಚುನಾವಣೆಯಲ್ಲೂ ಜನರು ಬಿಜೆಪಿಗೆ ಪಾಠ ಕಲಿಸ್ತಾರೆ. ಶಿವಮೊಗ್ಗ ಗಲಾಟೆ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಸಂಕ್ರಾಂತಿ ನಂತರ ಸರ್ಕಾರ ಬೀಳುತ್ತದೆ ಎಂಬ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರದಲ್ಲಿ ಬಿಜೆಪಿ ಹಗಲುಗನಸು ಕಾಣುತ್ತಿದೆ. ಸರ್ಕಾರ ಸುಭದ್ರವಾಗಿದ್ದು, ಜನರಿಗೆ ಒಳ್ಳೆಯ ಆಡಳಿತ ಕೊಡುತ್ತೇವೆ ಎಂದು ಹೇಳಿದರು.
ರಾಜ್ಯ ಸರ್ಕಾರ ವೀರಶೈವ ಲಿಂಗಾಯತ ಸಮುದಾಯವನ್ನು ಕಡೆಗಣಿಸಿಲ್ಲ. ಆಡಳಿತದಲ್ಲಿ ಜಾತಿವಾರು ಅಧಿಕಾರಿಗಳನ್ನು ಹಾಕಲು ಸಾಧ್ಯವಿಲ್ಲ ಎಂದು ಹೇಳಿದರು.