ಹುಬ್ಬಳ್ಳಿ: ಬಿಜೆಪಿಯವರಿಗೆ ಸುಳ್ಳು ಹೇಳಲು ಟ್ರೇನಿಂಗ್ ಕೊಡುವ ಒಂದು ಇನ್‌ಸ್ಟಿಟ್ಯೂಟ್ ಇದೆ. ಅಲ್ಲಿ ಕಲಿತು ಬಂದ ಗಿರಾಕಿ ಸಿ.ಟಿ. ರವಿ. ಅದು ಆರ್ ಎಸ್ ಎಸ್ ನ ಒಂದು ಬ್ರಾಂಚ್ ಆಗಿದೆ ಎಂದು ಸಚಿವ ಶಿವರಾಜ ತಂಗಡಗಿ ಆರೋಪಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರು ಸಿ.ಟಿ. ರವಿ ಅವರಿಗೆ ಕರೆದು ಬುದ್ಧಿ ಹೇಳುವುದನ್ನು ಬಿಟ್ಟು ಮೆರವಣಿಗೆ ಮಾಡುತ್ತಿದ್ದಾರೆ. ಅವರು ಮಾಡಿದ್ದೆ ಸರಿ ಎನ್ನುವಂತೆ ವರ್ತಿಸುತ್ತಿದ್ದಾರೆ. ಆರ್ ಎಸ್ ಎಸ್ ಟ್ರೇನಿಂಗ್ ನಲ್ಲಿ ಈ ರೀತಿ ಹೆಣ್ಣು ಮಕ್ಕಳಿಗೆ ಮಾತನಾಡಲು ಹೇಳಿದ್ದಾರಾ? ಬಿಜೆಪಿ ಮಹಿಳಾ ಮೋರ್ಚಾದಲ್ಲಿರುವ ತಾಯಂದಿರು ರವಿ ಅವರಿಗೆ ಬುದ್ಧಿ ಹೇಳಬೇಕು ಎಂದು ಸಲಹೆ ನೀಡಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಹಿರಿಯರು, ಅವರ ಬಾಯಿಯಿಂದ ಫೇಕ್ ಎನ್ ಕೌಂಟರ್ ಹೇಳಿಕೆಗಳು ಬರುತ್ತದೆ ಎಂದುಕೊಂಡಿರಲಿಲ್ಲ. ಇದು ಗುಜರಾತ್ ಅಲ್ಲ, ಕರ್ನಾಟಕ. ಎನ್ಕೌಂಟರ್ ಮಾಡುವ ಅವಶ್ಯಕತೆ ಇಲ್ಲ. ನಿಮ್ಮ ಎನ್ ಕೌಂಟರ್ ಸಂಸತಿ ನಮ್ಮಲ್ಲಿ ಇಲ್ಲ ಎಂದರು.
ಡಾ. ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಮಾತನಾಡಿದ್ದು ಸರಿಯಲ್ಲ. ನಾವು ದೇವರ ಹೆಸರು ಹೇಳಿ ಸ್ವರ್ಗ ಸೇರುವುದಿಲ್ಲ. ಬಿಜೆಪಿಯವರು ಭೂಮಿ ಮೇಲಿನ ಎಲ್ಲ ದೇವರ ಹೆಸರು ಹೇಳಿ ಸ್ವರ್ಗ ಸೇರಲಿ, ನಾವು ಅಂಬೇಡ್ಕರ್ ಹೆಸರು ಹೇಳಿ ಭೂಮಿ ಮೇಲೆ ಇರುತ್ತೇವೆ ಎಂದರು.
ಸರ್ಕಾರದ ಕಾರ್ಯಕ್ರಮ ಸರ್ಕಾರ ಮಾಡುತ್ತದೆ. ಪಕ್ಷದ ಕಾರ್ಯಕ್ರಮ ಪಕ್ಷ ಮಾಡುತ್ತದೆ. ಲೆಕ್ಕ ಕೇಳಿದರೆ ಕೊಡುತ್ತೇವೆ. ಗಾಂಧಿ ಕಾರ್ಯಕ್ರಮ ಸರ್ಕಾರ ಮಾಡುವುದು ತಪ್ಪು ಎಂದರೆ ಇವರು ಮಹಾತ್ಮ ಗಾಂಧಿ ವಿರೋಧಿಗಳು. ಡಿ. 26ಕ್ಕೆ ಸಾರ್ವಜನಿಕ ಕಾರ್ಯಕ್ರಮ ಮಾಡಿದ್ದೇವೆ. ಅದಕ್ಕೆ ಎಲ್ಲರನ್ನೂ ಕರೆದಿದ್ದೇವೆ. ಡಿ. 27ಕ್ಕೆ ಪಕ್ಷದ ಕಾರ್ಯಕ್ರಮ. ಅಲ್ಲಿಗೆ ಬಿಜೆಪಿಯವರನ್ನು ಕರೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಡವರಿಗೆ ಸಾಕಷ್ಟು ಯೋಜನೆ ಕೊಟ್ಟಿರುವ ಸಿದ್ದರಾಮಯ್ಯ ಅವರ ಹೆಸರು ರಸ್ತೆಗೆ ಇಟ್ಟರೆ ತಪ್ಪೇನು? ಬಿಜೆಪಿಯಿಂದ ಯಾರೂ ನೆಮ್ಮದಿಯಿಂದ ಇಲ್ಲ. ಅವರು ನೆಮ್ಮದಿ ಕೆಡಿಸುತ್ತಾರೆ. ಕೇಂದ್ರದಲ್ಲಿ 11 ವರ್ಷದಲ್ಲಿ ಬಡವರಿಗೆ, ರೈತರಿಗೆ ಒಂದು ಯೋಜನೆ ರೂಪಿಸಿಲ್ಲ ಎಂದು ಟೀಕಿಸಿದರು.