ರಥಯಾತ್ರೆ ಸ್ವಾಗತಕ್ಕೆ ಸಜ್ಜಾಗಿ:ಸಚಿವ ತಂಗಡಗಿ ಸೂಚನೆ

MINISTER SHIVARAJ TANGADAGI MEETING OFFICERS GOLDEN JUBILEE CELEBRATION KARNATAKA KOPPAL
ಕನ್ನಡ ಜ್ಯೋತಿ ರಥ ಯಾತ್ರೆ ಕಾರ್ಯಕ್ರಮ ಕುರಿತು ಕೊಪ್ಪಳದಲ್ಲಿ ಸೋಮವಾರ ಡಿಸಿ ನಲಿನ್ ಅತುಲ್ ವಿಡಿಯೋ ಸಂವಾದ ಸಭೆಯಲ್ಲಿ ಭಾಗಿಯಾದರು. ಎಡಿಸಿ ಸಾವಿತ್ರಿ ಕಡಿ, ಜಿಪಂ ಉಪ ಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್ ಇದ್ದರು.
Published on

ಕೊಪ್ಪಳ: ಕರ್ನಾಟಕ ಸಂಭ್ರಮ-50 ಜ್ಯೋತಿ ರಥಯಾತ್ರೆ ಕೊಪ್ಪಳ ಜಿಲ್ಲೆಯಲ್ಲಿ ನವೆಂಬರ್ 2ರಂದು ಸಂಚರಿಸಲಿದೆ.

ಸ್ವಾಗತಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಶಿವರಾಜ ತಂಗಡಗಿ ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರಿನ ವಿಕಾಸ ಸೌಧದಿಂದ ಸೋಮವಾರ ವಿವಿಧ ಜಿಲ್ಲೆಗಳ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಸಭೆ ನಡೆಸಿ ಮಾತನಾಡಿದರು.

ಹಂಪಿಯಲ್ಲಿ ನವೆಂಬರ್ 2ರಂದು ಸಿಎಂ ಸಿದ್ದರಾಮಯ್ಯ ಜ್ಯೋತಿ ಬೆಳಗುವ ಮೂಲಕ ಭುವನೇಶ್ವರಿ ಪ್ರತಿಮೆ ಹಾಗೂ ಜ್ಯೋತಿ ರಥ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಹೊಸಪೇಟೆ, ಮುನಿರಾಬಾದ್, ಗಿಣಿಗೇರಾ, ಕೊಪ್ಪಳ, ಲಕ್ಕುಂಡಿ ಮಾರ್ಗವಾಗಿ ಗದಗ ಜಿಲ್ಲೆಗೆ ತೆರಳಲಿದೆ.

ಜಿಲ್ಲೆಯ ಗಡಿಯಲ್ಲಿ ಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಬೇಕು. ಸಾಹಿತಿಗಳು, ಚಿಂತಕರು, ಕಲಾವಿದರು, ಕನ್ನಡಪರ ಸಂಘಟನೆಗಳು, ಇತರ ಸಂಘ, ಸಂಸ್ಥೆಗಳು ಹಾಗೂ ಸಾರ್ವಜನಿಕರನ್ನೊಳಗೊಂಡು ಕಾರ್ಯಕ್ರಮ ನಡೆಸಿ.

ಇದಕ್ಕೆ ಬೇಕಾದ ಅಗತ್ಯ ಸಿದ್ಧತೆ ಮಾಡಿಕೊಳ್ಳಿ. ರಸ್ತೆ ಶುಚಿಗೊಳಿಸಿ, ದೀಪಾಲಂಕಾರ ಮಾಡಿ. ಸೂಕ್ತ ಪೊಲೀಸ್ ಭದ್ರತೆ ಕಲ್ಪಿಸಿ. ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದವರನ್ನು ಆಹ್ವಾನಿಸಿ ಗೌರವಿಸುವಂತೆ ನಿರ್ದೇಶಿಸಿದರು.

ಡಿಸಿ ನಲಿನ್ ಅತುಲ್ ಮಾತನಾಡಿ, ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣಗಳಿಂದ ಕೇಂದ್ರ ಸ್ಥಾನ ಕೊಪ್ಪಳ ನಗರದವರೆಗೆ ಕನ್ನಡ ಜ್ಯೋತಿ ಸಂಚಾರ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಎಡಿಸಿ ಸಾವಿತ್ರಿ ಕಡಿ, ಜಿಪಂ ಉಪ ಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಇತರರಿದ್ದರು.

ಜಿಲ್ಲಾಡಳಿತ, ಪೊಲೀಸ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳ ಸಮನ್ವಯದಿಂದ ಕಾರ್ಯಕ್ರಮ ಆಯೋಜಿಸಿ. ನಮ್ಮ ನಾಡಿಗೆ ಕರ್ನಾಟಕವೆಂದು ನಾಮಕರಣ ಮಾಡಿ 50 ವರ್ಷ ತುಂಬಿದ ನೆನಪಿಗಾಗಿ ಯಾತ್ರೆ ನಡೆಯಲಿದ್ದು, ಜನರ ಹಬ್ಬವಾಗಿ ರೂಪಿಸಲು ಕ್ರಮ ಕೈಗೊಳ್ಳಿ. ಶಿವರಾಜ ತಂಗಡಗಿ. ಜಿಲ್ಲಾ ಉಸ್ತುವಾರಿ ಸಚಿವ ಕೊಪ್ಪಳ.

ಶಿವರಾಜ ತಂಗಡಗಿ. ಜಿಲ್ಲಾ ಉಸ್ತುವಾರಿ ಸಚಿವ ಕೊಪ್ಪಳ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net