

ಕೊಪ್ಪಳ: ಕನಗಿರಿ ಕ್ಷೇತ್ರದಲ್ಲಿ ಎಸ್ಸಿಪಿ-ಟಿಎಸ್ಪಿ ಯೋಜನೆ ಅನುದಾನ ದುರ್ಬಳಕೆ ಆಗಿದೆ ಎಂದು ದೂರು ನೀಡಲು ಹೋದ ಗುತ್ತಿಗೆದಾರರಿಗೆ ಸಚಿವ ಶಿವರಾಜ ತಂಗಡಗಿ ಸಹೋದರ ನಾಗರಾಜ ತಂಗಡಗಿ ದರ್ಪ ತೋರಿರುವ ಆರೋಪ ಕೇಳಿ ಬಂದಿದೆ.
ಗುತ್ತಿಗೆದಾರ ಗಣೇಶ ಹೊರತಟ್ನಾಳ್ ದೂರು ನೀಡಿದ್ದು, ಈ ಬಗ್ಗೆ ವರದಿ ಕೇಳಲು ಮಂಗಳವಾರ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ತೆರಳಿದ್ದರು.
ಆಗ ಸ್ಥಳದಲ್ಲೇ ಇದ್ದ ನಾಗರಾಜ್, ಕನಕಗಿರಿ ಕ್ಷೇತ್ರದ ವಿಷಯ ನಿನಗ್ಯಾಕೆ ? ನೀನೇನು ಸಂಬಂಧ, ನಿನ್ನ ಗುರುತೇನು ಎಂದು ದರ್ಪ ತೋರಿದ್ದಾರೆನ್ನಲಾಗಿದೆ.
ಇದರಿಂದ ಅಸಮಾಧಾನಗೊಂಡ ಗುತ್ತಿಗೆದಾರರು ನಾಗರಾಜ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಚಿವರ ಕಚೇರಿಗೆ ತೆರಳಿದ ನಾಗರಾಜ್ ಹಿಂದೆಯೇ ಹೋಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರಿಯಾಗಿ ಮಾತನಾಡದಿದ್ದಾಗ ಸಚಿವ ಶಿವರಾಜ ತಂಗಡಗಿಗೆ ದೂರವಾಣಿ ಕರೆ ಮಾಡಿ ದೂರಿದ್ದಾರೆ. ಸಹೋದರನೊಂದಿಗೆ ಮಾತನಾಡುವೆ. ತಪ್ಪಿದ್ದಲ್ಲಿ ಬುದ್ಧಿ ಹೇಳುವೆ ಎಂದು ಸಚಿವ ತಂಗಡಗಿ ಸಮಾಧಾನಿಸಿದ್ದಾರೆ.