ಗೃಹಜ್ಯೋತಿ ಯೋಜನೆಗೆ ಚಾಲನೆ, ಶೂನ್ಯ ಬಿಲ್ ವಿತರಣೆ

Screenshot_2023-08-06-11-36-25-44.jpg
Published on

ಬೆಳಗಾವಿ: ಬೆಳಗಾವಿ, ಗೃಹಜ್ಯೋತಿ ಯೋಜನೆಗಾಗಿ ಸರ್ಕಾರ ಬೆಳಗಾವಿ ಜಿಲ್ಲೆಗೆ ಪ್ರತಿವರ್ಷಕ್ಕೆ 516 ಕೋಟಿ ರೂ. ನೀಡಲಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿ ಕುಟುಂಬಕ್ಕೆ ತಿಂಗಳಿಗೆ 4ರಿಂದ 5 ಸಾವಿರ ರೂ. ಖರ್ಚು ಮಾಡಲಿದೆ. ಇದು ಮಕ್ಕಳ ಶಿಕ್ಷಣ ಹಾಗೂ ಕುಟುಂಬ ನಿರ್ವಹಣೆಗೆ ಬಳಕೆಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಶನಿವಾರ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿ, ಫಲಾನುಭವಿಗಳಿಗೆ ಶೂನ್ಯ ವಿದ್ಯುತ್ ಬಿಲ್ ವಿತರಿಸಿ ಅವರು ಮಾತನಾಡಿದರು. ಚುನಾವಣೆ ವೇಳೆ ನೀಡಿದ್ದ ಗೃಹಜ್ಯೋತಿ ಯೋಜನೆ ಭರವಸೆಯನ್ನು 3 ತಿಂಗಳಲ್ಲಿ ಜಾರಿಗೊಳಿಸಲಾಗುತ್ತಿದೆ. ಇನ್ನುಳಿದ ಗೃಹಲಕ್ಷ್ಮೀ, ಶಕ್ತಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆ ಜಾರಿಗೆ ತರಲಾಗುತ್ತಿದೆ. ಇಷ್ಟೊಂದು ದೊಡ್ಡ ಮೊತ್ತವನ್ನು ಸರ್ಕಾರ ಹೇಗೆ ಹೊಂದಾಣಿಕೆ ಮಾಡಲಿದೆ ಎಂಬ ಆತಂಕವಿತ್ತು. ಆದರೆ ಮುಖ್ಯಮಂತ್ರಿಗಳು ಇದನ್ನು ಸುಗಮವಾಗಿ ಜಾರಿಗೊಳಿಸುವ ಮೂಲಕ ನಮ್ಮ ಸರ್ಕಾರ ಬಡವರ ಪರ ಎಂಬುದನ್ನು ಸಾಬೀತುಪಡಿಸಿದ್ದಾರೆ. ಬೆಳಗಾವಿಯಲ್ಲಿ 10 ಲಕ್ಷಕ್ಕೂ ಅಧಿಕ ಗ್ರಾಹಕರಿಗೆ ಇದರ ಪ್ರಯೋಜನೆ ದೊರಕಲಿದೆ. ಈವರೆಗೆ ಶೇ.80ರಷ್ಟು ಗ್ರಾಹಕತು ಯೋಜನೆಯಡಿ ನೋಂದಣಿ ಮಾಡಿದ್ದಾರೆ ಎಂದರು.
ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಗ್ಯಾರಂಟಿ ಯೋಜನೆಗಳು ಪೂರಕವಾಗಿವೆ. ಮುಂಬರುವ ದಿನಗಳಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಜತೆಗೆ ಅಭಿವೃದ್ಧಿಯತ್ತ ದಾಪುಗಾಲು ಹಾಕೋಣ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹೆಸ್ಕಾಂ ಮುಖ್ಯ ಎಂಜಿನಿಯರ್ ವಿ.ಪ್ರಕಾಶ್ ಅವರು, ರಾಜ್ಯದಲ್ಲಿ 2.20 ಕೋಟಿ ಗೃಹಬಳಕೆಯ ಗ್ರಾಹಕರಿಗೆ ಹಾಗೂ ಬೆಳಗಾವಿ ಜಿಲ್ಲೆಯ 10.65 ಲಕ್ಷ ಗ್ರಾಹಕರಿಗೆ ಈ ಯೋಜನೆಯ ಲಾಭ ದೊರಕಲಿದೆ. ನೋಂದಣಿ ಪ್ರಕ್ರಿಯೆ ಎಲ್ಲೆಡೆ ಚುರುಕಿನಿಂದ ನಡೆದಿದ್ದು, ಎಲ್ಲ ಅರ್ಹರಿಗೆ ಯೋಜನೆಯ ಲಾಭತಲುಪಿಸಲಾಗುವುದು ಎಂದರು.
ಶಾಸಕರಾದ ವಿಶ್ವಾಸ ವೈದ್ಯ, ಬಾಬಾಸಾಹೇಬ್ ಪಾಟೀಲ, ಪೃಥ್ವಿ ಕತ್ತಿ ಹಾಗೂ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಪಂ ಸಿಇಒ ಹರ್ಷಲ್ ಭೋಯರ್, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಹೆಸ್ಕಾಂ ಪ್ರಧಾನ ವ್ಯವಸ್ಥಾಪಕ ಸಿದ್ದು ಹುಲ್ಲೋಳಿ ಇತರರಿದ್ದರು. ಹೆಸ್ಕಾಂ ಅಧೀಕ್ಷಕ ಎಂಜಿನಿಯರ್ ಪ್ರವೀಣಕುಮಾರ್ ಸ್ವಾಗತಿಸಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಆಸಿಫ್(ರಾಜು) ಸೇಠ್ ಸರ್ವಮಂಗಳ ಅರಳಿಮಟ್ಟಿ ನಿರೂಪಿಸಿದರು. ಮಹಾನಗರ ಪಾಲಿಕೆ ಸದಸ್ಯರು ಸೇರಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಫಲಾನುಭವಿಗಳು ಕಾರ್ಯಕ್ರಮದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net