ಶೀಘ್ರ ಆರನೇ ಗ್ಯಾರಂಟಿ ಜಾರಿ, ಸಚಿವ ಸಂತೋಷ್ ಲಾಡ್ ಭರವಸೆ

check distribution
ಅಪಘಾತದಲ್ಲಿ ಮೃತಪಟ್ಟ ಶಿವಮೊಗ್ಗದ ಕಾರ್ಮಿಕನ ಕುಟುಂಬದವರಿಗೆ ಸಚಿವ ಸಂತೋಷ್ ಲಾಡ್ 5 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು. ಎಸ್.ಎನ್.ಚನ್ನಬಸಪ್ಪ, ಶಾರದಾ ಪೂರ‌್ಯಾನಾಯ್ಕಾ, ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಆರ್.ಪ್ರಸನ್ನಕುಮಾರ್, ಜಿ.ಪಲ್ಲವಿ, ಎಸ್.ರವಿಕುಮಾರ್, ಎಚ್.ಎಸ್.ಸುಂದರೇಶ್, ಗೋಪಾಲಕೃಷ್ಣ ಇದ್ದರು.
Published on

ಶಿವಮೊಗ್ಗ: ಆಶಾ ಕಾರ್ಯಕರ್ತೆಯರಿಗೆ 6ನೇ ಗ್ಯಾರಂಟಿಯನ್ನು ಶೀಘ್ರ ಜಾರಿಗೆ ತರುತ್ತೇವೆ. ಸ್ವಲ್ಪ ತಡವಾಗಿಯಾದರೂ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಬೇಡಿಕೆ ಈಡೇರಿಸಲು ಪ್ರಯತ್ನಿಸುತ್ತೇವೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಭರವಸೆ ನೀಡಿದರು.

ಶಿವಮೊಗ್ಗದಲ್ಲಿ ಸೋಮವಾರ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್‌ಕಾರ್ಡ್ ವಿತರಣೆ ಹಾಗೂ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ಖಾಸಗಿ ಸಂಸ್ಥೆ ಅಥವಾ ಕಂಪನಿಗಳಲ್ಲಿ ಕೆಲಸ ಮಾಡುವ ಎಸ್‌ಸಿ, ಎಸ್‌ಟಿ ಕಾರ್ಮಿಕರಿಗೆ ಇಲಾಖೆಯಿಂದಲೇ ಶೇ.50ರಷ್ಟು ಹಣ ನೀಡುವ ಆಶಾದೀಪ ಯೋಜನೆಯನ್ನು ದೇಶದಲ್ಲೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಜಾರಿಗೆ ತರಲಾಗಿದ್ದು, ಇದು ಕಾರ್ಮಿಕರ ಪಾಲಿಗೆ ಆಶಾದೀಪವಾಗಿದೆ ಎಂದು ತಿಳಿಸಿದರು. ಇದೇ ಮೊದಲ ಬಾರಿಗೆ ಇಲಾಖೆಯು ಸಣ್ಣ ಸಣ್ಣ ಕೆಲಸ ಮಾಡುವ 91 ಸಮುದಾಯಗಳನ್ನು ಗುರುತಿಸಿ ಸ್ಮಾರ್ಟ್ ಕಾರ್ಡ್ ನೀಡುತ್ತಿದೆ. ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಯೋಜನೆಗಳಿಗಾಗಿ ಡೀಸೆಲ್, ಪೆಟ್ರೋಲ್ನಿಂದ 50 ಪೈಸೆಯಿಂದ 1 ರೂ. ಸೆಸ್ ನೀಡಿದಲ್ಲಿ ಅನುಕೂಲವಾಗುತ್ತದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೂ ಮನವಿ ಮಾಡಿದ್ದೇನೆ ಎಂದರು.

ರಾಜ್ಯ ಸರ್ಕಾರ 56-60 ಸಾವಿರ ಕೋಟಿ ರೂ.ವರೆಗೆ ಗ್ಯಾರಂಟಿಗಾಗಿ ಪ್ರತಿ ವರ್ಷ ವೆಚ್ಚ ಮಾಡುತ್ತಿದೆ. ಅಭಿವೃದ್ಧಿಗಾಗಿ 83 ಸಾವಿರ ಕೋಟಿ ರೂ. ನೀಡಿದೆ. ಶಕ್ತಿ ಯೋಜನೆಯಿಂದ ಶೇ.40ರಷ್ಟು ಹೆಣ್ಣು ಮಕ್ಕಳ ಪ್ರಯಾಣ ಹೆಚ್ಚಿದೆ. ಗ್ಯಾರಂಟಿ ಯೋಜನೆಗಳಡಿ ಬಡವರಿಗೆ ನೀಡುತ್ತಿರುವುದು ಉಳಿತಾಯಕ್ಕಾಗಿ ಅಲ್ಲ. ಆ ಹಣ ಸಂಪೂರ್ಣವಾಗಿ ಮತ್ತೆ ಮಾರುಕಟ್ಟೆಗೆ ವಾಪಸ್ ಬರುತ್ತಿರುವ ಕಾರಣ ರಾಜ್ಯದ ಜಿಡಿಪಿ ಭಾರತದಲ್ಲಿ ನಂ.1 ಸ್ಥಾನಕ್ಕೇರಿದೆ. - ಸಂತೋಷ್ ಲಾಡ್, ಕಾರ್ಮಿಕ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net