ಅಸಂಘಟಿತ ಕಾರ್ಮಿಕರಿಗೆ ಯುನಿವರ್ಸಲ್ ಕಾರ್ಡ್, ಕಾಂಗ್ರೆಸ್ ಭವನದಲ್ಲಿ ಸಚಿವ ಸಂತೋಷ್ ಲಾಡ್ ಹೇಳಿಕೆ

mini
ಕಾರ್ಮಿಕ ಸಚಿವ ಸಂತೋಷ್ ಲಾಡ್ ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಸೋಮವಾರ ಭೇಟಿ ನೀಡಿ ಕಾರ್ಯಕರ್ತರ ಜತೆ ಮಾತನಾಡಿದರು.
Published on

ಮಂಗಳೂರು: ಅಸಂಘಟಿತ ಕಾರ್ಮಿಕರಿಗೆ ಯುನಿವರ್ಸಲ್ ಕಾರ್ಡ್ ತರುವ ಚಿಂತನೆ ಮಾಡಲಾಗಿದ್ದು, ಈ ಬಗ್ಗೆ ಹೊಸ ಕಾಯ್ದೆ ಜಾರಿಗೊಳಿಸುವ ನಿರ್ಧಾರ ಸರ್ಕಾರದ ಮುಂದಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.

ಕಾರ್ಮಿಕ ಸಚಿವರಾಗಿ ಮೊದಲ ಬಾರಿ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಸೋಮವಾರ ಭೇಟಿ ನೀಡಿ ಕಾರ್ಯಕರ್ತರ ಜತೆ ಮಾತನಾಡಿದರು.

ಸ್ವಿಗ್ಗಿ, ಅಮೆಜಾನ್, ಫ್ಲಿಫ್‌ಕಾರ್ಟ್ ಸೇರಿದಂತೆ ಆನ್‌ಲೈನ್ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿರುವ ರಾಜ್ಯದ ನಾಲ್ಕು ಲಕ್ಷ ಕಾರ್ಮಿಕರಿಗೆ ವಿಶೇಷ ಕಾರ್ಯಕ್ರಮ ರೂಪಿಸಲು ರಾಹುಲ್ ಗಾಂಧಿಯವರು ಭಾರತ್ ಜೋಡೊ ಯಾತ್ರೆ ಸಂದರ್ಭ ಸೂಚಿಸಿದ್ದು, ಅದರಂತೆ ಮುಖ್ಯಮಂತ್ರಿಯವರು ಹಣ ಬಿಡುಗಡೆ ಮಾಡಿದ್ದಾರೆ. ಇವರಿಗೆ ಎರಡು ತಿಂಗಳಲ್ಲಿ ಕಾರ್ಡ್ ವಿತರಿಸಿ ಶೀಘ್ರದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳನ್ನು ಪ್ರಾರಂಭಿಸುತ್ತೇವೆ ಎಂದು ತಿಳಿಸಿದರು.

ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಇಬ್ರಾಹಿಂ ಕೋಡಿಜಾಲ್, ಮಮತಾ ಗಟ್ಟಿ, ಲುಕ್ಮಾನ್ ಬಂಟ್ವಾಳ, ಲಾರೆನ್ಸ್ ಡಿಸೋಜ, ಬಿ.ಎಂ.ಅಬ್ಬಾಸ್ ಅಲಿ, ಮನೋರಾಜ್ ರಾಜೀವ, ಮೆರಿಲ್ ರೇಗೋ ಉಪಸ್ಥಿತರಿದ್ದರು.

ಟ್ರಾನ್ಸ್‌ಪೋರ್ಟ್ ಬೋರ್ಡ್ ರಚನೆ

ವಾಣಿಜ್ಯ ಸಾರಿಗೆ ಇಲಾಖೆಯಲ್ಲಿ ಪರವಾನಗಿ ಹೊಂದಿವವರಿಗೆ, ಚಾಲಕರು, ಕ್ಲೀನರ್, ಮೆಕಾನಿಕಲ್ ಕೆಲಸಗಾರರು ಸೇರಿದಂತೆ ಸುಮಾರು 50 ಲಕ್ಷ ಮಂದಿಗೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಜನವರಿ- ಫೆಬ್ರವರಿ ಒಳಗಾಗಿ ಟ್ರಾನ್ಸ್‌ಪೋರ್ಟ್ ಬೋರ್ಡ್ ರಚಿಸುತ್ತೇವೆ ಎಂದು ಸಂತೋಷ್ ಲಾಡ್ ಹೇಳಿದರು. ಹೆಚ್ಚು ಸೆಸ್ ಸಂಗ್ರಹವಾದರೆ ಟೈಲರ್, ನೇಕಾರರು, ಕೂಲಿ ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕರಿಗೆ ಅನುಕೂಲಕರವಾಗಲಿದ್ದು, ಈ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net