ಜಾಗಿಂಗ್ ಡ್ರೆಸ್​ನಲ್ಲಿ ಸಚಿವರ ದೇವತ್ಕಲ್ ಪ್ರದಕ್ಷಿಣೆ; ಊರ ಜನರ ಸಮಸ್ಯೆ ಆಲಿಸಿದ ಆರ್.ಅಶೋಕ್

Ashok
ದೇವತ್ಕಲ್​ನ ದಲಿತರ ಕಾಲನಿಯಲ್ಲಿ ಭಾನುವಾರ ಜನರ ಸಮಸ್ಯೆ ಆಲಿಸಿದ ಕಂದಾಯ ಸಚಿವ ಆರ್.ಅಶೋಕ್, ಶಾಸಕ ರಾಜುಗೌಡ ಮತ್ತಿತರರು ಇದ್ದರು.
Published on

| ಶ್ರೀಕರ ಜೋಶಿ ಸುರಪುರ

ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ದೇವತ್ಕಲ್​ನಲ್ಲಿ ಶನಿವಾರ ಗ್ರಾಮ ವಾಸ್ತವ್ಯ ಮಾಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದ ಕಂದಾಯ ಸಚಿವ ಆರ್.ಅಶೋಕ್, ಭಾನುವಾರ ಬೆಳಗ್ಗೆ ಜಾಗಿಂಗ್ ಡ್ರೆಸ್​ನಲ್ಲಿ ವಾಯುವಿಹಾರ ನಡೆಸುತ್ತ ಊರ ಪ್ರದಕ್ಷಿಣೆ ಹಾಕಿದರು.

ಶನಿವಾರ ಇಡೀ ದಿನ ಕಾರ್ಯಕ್ರಮಗಳ ಒತ್ತಡದ ಮಧ್ಯೆಯೂ ಜನರೊಂದಿಗೆ ಬೆರೆತು ತಡರಾತ್ರಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಿದ್ರೆಗೆ ಜಾರಿದರು. ಭಾನುವಾರ ಬೆಳಗ್ಗೆ ಯಲ್ಲಪ್ಪ ಕುರಕುಂದಿ ಅವರ ದಾಳಿಂಬೆ ತೋಟಕ್ಕೆ ತೆರಳಿ ರೈತರೊಂದಿಗೆ ಸಂವಾದ ನಡೆಸಿ ಸಮಸ್ಯೆ, ಕೃಷಿ ಚಟುವಟಿಕೆ ಬಗ್ಗೆ ಮಾಹಿತಿ ಪಡೆದರು.

ನಂತರ ಪ್ರಾಥಮಿಕ ಶಾಲೆಗೆ ತೆರಳಿ ಸ್ಮಾರ್ಟ್​ಕ್ಲಾಸ್ ಉದ್ಘಾಟಿಸಿ, ಮಕ್ಕಳೊಂದಿಗೆ ಪಾಠ ಕುರಿತು ರ್ಚಚಿಸಿ ಪರಿಣಾಮಕಾರಿ ಬೋಧನೆ ಮಾಡುತ್ತಿರುವ ಶಿಕ್ಷಕರನ್ನು ಸನ್ಮಾನಿಸಿ ಹುರಿದುಂಬಿಸಿದರು. ಬಳಿಕ ದಲಿತ ಕಾಲನಿಯಲ್ಲಿ ಮಹಿಳೆಯರ ಸಮಸ್ಯೆ ಆಲಿಸಿದರು. ಮನೆ ಸೋರುತ್ತದೆ ಎಂದು ಹೇಳುತ್ತಲೇ ಆಶ್ರಯ ಮನೆ ಹಾಕಿಕೊಡುವಂತೆ ಜತೆಗಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಕಾಲನಿಯಲ್ಲಿ ಮೂಲ ಸೌಲಭ್ಯಗಳ ಕೊರತೆಯಿದೆ. ಶೌಚಗೃಹ, ರಸ್ತೆ, ಚರಂಡಿ, ಕುಡಿಯುವ ನೀರು ಒದಗಿಸುವಂತೆ ಯುವತಿಯೊಬ್ಬಳು ಬೇಡಿಕೆ ಮಂಡಿಸಿದಳು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 1 ಕೋಟಿ ರೂ. ನೀಡಿದ್ದು, ದಲಿತರ ಕಾಲನಿಗೆ ಎಲ್ಲ ಸೌಲಭ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದರಲ್ಲದೆ, ನಾನಾ ಕಾಮಗಾರಿಗಳಿಗೆ ಶಿಲಾನ್ಯಾಸ ಜತೆಗೆ ಉದ್ಘಾಟನೆ ನೆರವೇರಿಸಿದರು.

ದೇವತ್ಕಲ್ ಗ್ರಾಮ ವಾಸ್ತವ್ಯ ನನ್ನ ಜೀವನ ಸಂತಸ ಕ್ಷಣಗಳಲ್ಲಿ ಒಂದಾಗಿದೆ. ಶಾಸಕ ರಾಜುಗೌಡ ಹಾಗೂ ಕ್ಷೇತ್ರದ ಜನರು ತೋರಿದ ಪ್ರೀತಿ ವಿಶ್ವಾಸಕ್ಕೆ ಋಣಿಯಾಗಿದ್ದೇನೆ. ಕಲ್ಯಾಣ ಕರ್ನಾಟಕ ಪ್ರದೇಶ ಅಕ್ಕರೆ ಮತ್ತು ಕಕ್ಕೂಲಾತಿಯ ಸಂಕೇತವಾಗಿದೆ. | ಆರ್.ಅಶೋಕ್ ಕಂದಾಯ ಸಚಿವ

ದಲಿತರ ಮನೆ ಊಟ: ಬೆಳಗ್ಗೆ 9ಕ್ಕೆ ದಲಿತ ಕಾಲನಿಯ ದ್ಯಾಮವ್ವ ಪರಮಣ್ಣ ಮನೆಗೆ ತೆರಳಿ ಕುಶಲೋಪರಿ ವಿಚಾರಿಸಿದ ಸಚಿವ ಅಶೋಕ್, ಉತ್ತರ ಕರ್ನಾಟಕ ಶೈಲಿಯ ಸಜ್ಜಿರೊಟ್ಟಿ, ತುಪ್ಪದ ಹೀರೇಕಾಯಿ, ಮಡಿಕೆ ಕಾಳು ಪಲ್ಯ, ಫುಂಡಿ ಪಲ್ಯ, ಶೇಂಗಾ ಚಟ್ನಿ, ಉರುಗಡಲೆ ಚಟ್ನಿ, ಮೊಸರು, ಉಪ್ಪಿನಕಾಯಿ ಊಟ ಮಾಡಿ ಅಡುಗೆ ಸೂಪರ್ ಎಂದು ಹೇಳಿ ಖುಷಿಪಟ್ಟರು. ನಂತರ ಬಡಾವಣೆಯ ಶ್ರೀ ಸಿದ್ಧ ಬೀರಲಿಂಗೇಶ್ವರ ಬಬಲಾದಿ ಮಠಕ್ಕೆ ತೆರಳಿ ಆಶೀರ್ವಾದ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net