ಜಿಲ್ಲೆಯಲ್ಲಿ 2.92 ಲಕ್ಷ ಜಮೀನಿನ ಪೌತಿ ಖಾತೆ

udp-30-minister
Published on

ಉಡುಪಿ: ಪೌತಿ ಖಾತೆ ಅಭಿಯಾನ ರಾಜ್ಯದಲ್ಲಿ ಆರಂಭವಾಗಿದೆ. ಜಿಲ್ಲೆಯಲ್ಲಿ 2,92,000 ಜಮೀನಿನ ಪೌತಿ ಖಾತೆ ಮಾಡಬೇಕಿದೆ. ಜಿಲ್ಲೆಯಲ್ಲಿ ಈ ಯೋಜನೆ ಪ್ರಗತಿ ತುಂಬಾ ಕುಂಠಿತವಾಗಿದೆ. ಈ ಕಾರ್ಯದ ವೇಗವನ್ನು ಹೆಚ್ಚಿಸಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಣಿಪಾಲ ರಜತಾದ್ರಿಯ ಅಟಲ್​ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮೃತರ ಹೆಸರಿನಲ್ಲಿ ಜಮೀನಿನ ಖಾತೆಗಳು ಇದ್ದಲ್ಲಿ ಸರ್ಕಾರದ ಸೌಲಭ್ಯ ಹಾಗೂ ಸಬ್ಸಿಡಿಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇದರಿಂದ ರೈತರಿಗೆ ತೊಂದರೆ ಉಂಟಾಗುತ್ತಿದೆ. ಹೀಗಾಗಿ ಆದ್ಯತೆ ಮೇಲೆ ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ಜಿಲ್ಲೆಯಲ್ಲಿ ಬಗರ್​ ಹುಕುಂ ಅಡಿಯಲ್ಲಿ 687 ಜನರಿಗೆ ಹಕ್ಕುಪತ್ರಗಳನ್ನು ವಿತರಿಸುವ ಕಾರ್ಯವಾಗಬೇಕಾಗಿತ್ತು. ಆದರೆ ಇದುವರೆಗೆ ಕೇವಲ 9 ಜನರಿಗೆ ಮಾತ್ರ ಹಕ್ಕುಪತ್ರ ವಿತರಿಸಲಾಗಿದೆ. ಆಗಸ್ಟ್​ 15 ರ ಒಳಗಾಗಿ ಅರ್ಹರಿರುವ ಪ್ರತಿಯೊಬ್ಬರಿಗೂ ಹಕ್ಕುಪತ್ರ ವಿತರಿಸುವ ಕಾರ್ಯವಾಗಬೇಕೆಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಭೂ ಸುರಕ್ಷಾ ಯೋಜನೆ ಅಡಿ ಕಂದಾಯ ಇಲಾಖೆಯ ಭೂ ದಾಖಲೆಗಳನ್ನು ಗಣಕೀಕರಣಗೊಳಿಸುವ ಕಾರ್ಯ ನೆರೆಯ ಜಿಲ್ಲೆಗೆ ಹೋಲಿಸಿದಲ್ಲಿ ಕಡಿಮೆ ಇದೆ. ಹೀಗಾಗಿ ದಾಖಲೆಗಳನ್ನು ಗಣಕೀಕರಿಸುವ ಕಾರ್ಯ ತ್ವರಿತವಾಗಿ ಕೈಗೊಳ್ಳಬೇಕು. ಇದರಿಂದ ಜನರು ಜಮೀನಿನ ದಾಖಲೆಗಳಿಗಾಗಿ ತಹಶೀಲ್ದಾರ್​ ಕಚೇರಿಗೆ ಅಲೆದಾಡುವುದು ತಪು$್ಪತ್ತದೆ. ಆನ್​ ಲೈನ್​ ಮೂಲಕ ಅರ್ಜಿ ಹಾಕಿ ದಾಖಲೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಜಿಲ್ಲೆಯಲ್ಲಿ ಈಗಾಗಲೇ ಬಹುತೇಕ ಗ್ರಾಮ ಲೆಕ್ಕಿಗರಿಗೆ ಲ್ಯಾಪ್​ ಟಾಪ್​ ವಿತರಣೆ ಮಾಡಲಾಗಿದೆ. ಗ್ರಾಮ ಲೆಕ್ಕಿಗರು ತಮ್ಮ ಪ್ರತಿಯೊಂದು ಕಾರ್ಯ ಈಗಿನಿಂದಲೇ ಇ - ಆಫೀಸ್​ ಮೂಲಕ ಮಾಡಬೇಕು ಎಂದು ಸೂಚನೆ ನೀಡಿದರು.

ಸಿಡಿಲಿನ ಬಗ್ಗೆ ಮಾಹಿತಿ ನೀಡಿ

ಪೂರ್ವ ಮುಂಗಾರಿನಲ್ಲಿ ಮಳೆ ಬರುವ ಸಂದರ್ಭದಲ್ಲಿ ಸಿಡಿಲು, ಗುಡುಗಿನಿಂದ ಪ್ರತಿ ವರ್ಷ 70 ಕ್ಕೂ ಹೆಚ್ಚು ಜನರು ರಾಜ್ಯದಲ್ಲಿ ಸಾವಗೀಡಾಗುತ್ತಿದ್ದಾರೆ. ಸಿಡಿಲು ಬಡಿಯುವಾಗ ಜನರು ಎಲ್ಲಿ ಆಶ್ರಯ ಪಡೆಯಬೇಕು ಎಂಬ ಮಾಹಿತಿ ಕೊರತೆಯಿಂದ ಈ ರೀತಿಯ ಸಾವು -ನೋವುಗಳು ಉಂಟಾಗುತ್ತಿವೆ. ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಪಂಚಾಯಿತಿ ಮಟ್ಟದ ಟಾಸ್ಕ್​ ಪೋರ್ಸ್​ ಸಮಿತಿಗಳು ಸಕ್ರಿಯವಾಗಿರಬೇಕು. ಅತಿವೃಷ್ಟಿ ಯಿಂದ ಮನೆಗಳು ಪೂರ್ಣ ಪ್ರಮಾಣದಲ್ಲಿ ಹಾಳಾಗಿದ್ದಲ್ಲಿ ಅವರುಗಳಿಗೆ ಪರಿಹಾರದ ಅನುದಾನವನ್ನು ನೀಡುವುದರ ಜೊತೆಗೆ ದೇವರಾಜ ಅರಸು ವಸತಿ ಯೋಜನೆಯಡಿಯಲ್ಲಿ ಮನೆಯನ್ನು ಮಂಜೂರು ಮಾಡಬೇಕು. ಈ ರೀತಿ ಮಂಜೂರು ಮಾಡುವ ಅಧಿಕಾರ ಕಂದಾಯ ಇಲಾಖೆಗೆ ಇದೆ ಎಂದರು.

ಮಳೆಯಿಂದ ರಸ್ತೆಗಳು ಹಾಳಾಗಿವೆ. ಜನರ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಗುಂಡಿ ಮುಚ್ಚುವ ಕಾರ್ಯವನ್ನು ಕೈಗೊಳ್ಳಬೇಕು. ಇವು ಎನ್​.ಡಿ.ಆರ್​.ಎಫ್​ ನಿಯಮಾವಳಿಯ ಪ್ರಕಾರ ಪ್ರಸ್ತಾವನೆಯನ್ನು ಸಲ್ಲಿಸಿದರೆ ಅನುಮೋದನೆ ನೀಡಲಾಗುವುದು ಎಂದರು. ಸಭೆಯಲ್ಲಿ ಶಾಸಕ ಕಿರಣ್​ ಕುಮಾರ್​ ಕೊಡ್ಗಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಿಕ್​ ಬಾಯಲ್​, ಡಿ.ಎಫ್​.ಓ ಗಣಪತಿ, ವೈಲ್ಡ್​ ಲೈಫ್​ ಡಿ.ಎಫ್​.ಓ ಶಿವರಾಮ್​ ಎಂ ಬಾಬು ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net