ಸಚಿವ ಸ್ಥಾನಕ್ಕೆ ಖುಷಿಯಿಂದಲೇ ರಾಜೀನಾಮೆ ಕೊಡುವೆ ಎಂದ ಆನಂದ್​ಸಿಂಗ್​!

Anand Singh
Published on

ಬಳ್ಳಾರಿ: ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ನನ್ನ ಬಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೇಳಿದರೆ ಖುಷಿಯಿಂದಲೇ ಕೊಡುವೆ ಎಂದು ಅರಣ್ಯ ಸಚಿವ ಆನಂದ್​ ಸಿಂಗ್​ ಹೇಳಿದ್ದಾರೆ.

ಬಳ್ಳಾರಿ ಜಿಲ್ಲೆ ವ್ಯಾಪ್ತಿಯಲ್ಲಿರುವ ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯಾಗಿಸುವ ಬಗ್ಗೆ ಬುಧವಾರ ಸಚಿವ ಸಂಪುಟದ ಸಭೆಯಲ್ಲಿ ತಾತ್ವಿಕ ಅನುಮೋದನೆ ಸಿಕ್ಕ ಕೂಡಲೇ ಆನಂದ್ ಸಿಂಗ್​ ಈ ರೀತಿ ಹೇಳಿದ್ದಾರೆ.

ವಿಜಯನಗರ ಜಿಲ್ಲೆಯಾಗೋದು ನನಗೆ ಮುಖ್ಯ. ವಿಜಯನಗರ ಜಿಲ್ಲೆಯ ಮುಂದೆ ಸಚಿವ ಸ್ಥಾನ ತೃಣಕ್ಕೆ ಸಮಾನ ಎಂದಿರುವ ಆನಂದ್​ ಸಿಂಗ್​, ವಿಜಯನಗರ ಜಿಲ್ಲೆ ಘೋಷಣೆ ಮಾಡಿದ ಯಡಿಯೂರಪ್ಪ ವಿಜಯನಗರದ ವೀರಪುತ್ರ ಎಂದು ಭಾವುಕರಾದರು.

ಮನೆಯಲ್ಲಿ ಅಣ್ಣ-ತಮ್ಮಂದಿರು ಬೇರೆಯಾದರೆ ನೋವು ಇರುತ್ತದೆ. ಜಿಲ್ಲೆ ವಿಭಜನೆ ಆದರೆ ಭಿನ್ನಾಭಿಪ್ರಾಯ ಇರೋದಿಲ್ವಾ? ಶಾಸಕ ಸೋಮಶೇಖರ ರೆಡ್ಡಿ ಜತೆಗೆ ಮಾತನಾಡುವೆ.‌ ಈಗಾಗಲೇ ಯಡಿಯೂರಪ್ಪ ಕೂಡ ರೆಡ್ಡಿ ಜತೆ ಮಾತನಾಡಿದ್ದಾರೆ. ಜಿಲ್ಲೆಯ ವಿಚಾರದಲ್ಲಿ ಪ್ರತಿಷ್ಠೆ ಬೇಡ. ನಾವೆಲ್ಲರೂ ಅಣ್ಣ-ತಮ್ಮಂದಿರು ಎನ್ನುವ ಮೂಲಕ ಸೋಮಶೇಖರ ರೆಡ್ಡಿ ಅವರ ಮನವೊಲಿಸುವ ಯತ್ನವನ್ನು ಆನಂದ ಸಿಂಗ್ ಮಾಡಿದರು.

ವಿಜಯಯಪುರವನ್ನು ನೂತನ ಜಿಲ್ಲೆಯನ್ನಾಗಿ ಮಾಡಲು ತಾತ್ವಿಕ ಅನುಮೋದನೆ ಪಡೆದು ಬೆಂಗಳೂರಿಂದ ಹೊಸಪೇಟೆಗೆ ಹೆಲಿಕಾಪ್ಟರ್​ನಲ್ಲಿ ಬಂದಿಳಿಯುತ್ತಿದ್ದಂತೆ ಆನಂದ ಸಿಂಗ್​ಗೆ ನೂರಾರು ಜನರು ಹೂವಿನ ಮಳೆ ಸುರಿಸಿ ಶುಭಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net