

ಧಾರವಾಡ: ಇಲ್ಲಿನ ನಗರ ಸಾರಿಗೆಯ ನೂತನ ಸಿಬಿಟಿ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸೋಮವಾರ ಶಂಕುಸ್ಥಾಪನೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ನೂತನ ಕಟ್ಟಡವನ್ನು ೧೩.೧೧ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವುದು. ಅಂದಾಜು ೫೦ ವರ್ಷ ಹಳೆಯದಾದ ಧಾರವಾಡದ ಸಿಬಿಟಿಯನ್ನು ಇದೀಗ ಮೇಲ್ದರ್ಜೆಗೆ ಏರಿಸಲಾಗುತ್ತಿದ್ದು, ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.
ಇಲ್ಲಿ ಮುಖ್ಯ ಕಟ್ಟಡ, ಮಹಿಳೆಯರಿಗೆ ವಿಶ್ರಾಂತಿ ಗೃಹ, ಪ್ರತ್ಯೇಕ ಶೌಚಗೃಹ, ಕಾಂಕ್ರಿಟ್ ಅಳವಡಿಕೆ, ಬಸ್ ನಿಲುಗಡೆಗೆ ೪ ಅಂಕಣ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಕೆಲಸ, ಪ್ರಯಾಣಿಕರಿಗೆ ಆಸನ ವ್ಯವಸ್ಥೆ, ಉಪಹಾರ ಗೃಹ ಮತ್ತು ವಾಣಿಜ್ಯ ಮಳಿಗೆಗಳು, ಸಿಬ್ಬಂದಿ ವಿಶ್ರಾಂತಿ ಕೊಠಡಿ ಹಾಗೂ ಸಂಚಾರ ನಿಯಂತ್ರಣಾ ಕೊಠಡಿ ನಿರ್ಮಾಣ ಮಾಡಲಾಗುವುದು ಎಂದರು.
ರಾಜ್ಯದ ಸಾರಿಗೆ ನಿಗಮಗಳಿಗೆ ಹೆಚ್ಚುವರಿ ಬಸ್‌ಗಳನ್ನು ಖರೀದಿ ಮಾಡಲಾಗುತ್ತಿದ್ದು, ಇದರಿಂದ ಬಸ್‌ಗಳ ಕೊರತೆ ನೀಗಲಿದೆ ಎಂದು ಸಚಿವ ರೆಡ್ಡಿ ಪ್ರತಿಕ್ರಿಯಿಸಿದರು.
ಕಾರ್ಮಿಕ ಸಚಿವ ಸಂತೋಷ ಲಾಡ್, ಶಾಸಕ ಎನ್.ಎಚ್. ಕೋನರಡ್ಡಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್., ಇತರರಿದ್ದರು.