

ಹುಬ್ಬಳ್ಳಿ: ಬಿಜೆಪಿಯ ಯಾರೊಬ್ಬರೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿಲ್ಲ ಆದರೆ, ಕಾಂಗ್ರೆಸ್ ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದೆ. ಬಿಜೆಪಿಯವರು ದ್ವೇಷ ಪ್ರೇಮಿಗಳು, ಕಾಂಗ್ರೆಸ್ ನವರು ದೇಶ ಪ್ರೇಮಿಗಳು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಪಾದಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಜನರಿಗೆ ಸ್ವಾತಂತ್ರ್ಯದ ಹಕ್ಕು ಕೊಟ್ಟಿದ್ದು ಕಾಂಗ್ರೆಸ್ ಪಕ್ಷ, ಬಿಜೆಪಿಯು ಕುಬೇರರ ಪಕ್ಷವಾಗಿದ್ದು 4 ಸಾವಿರ ಕೋಟಿಗಿಂತ ಹೆಚ್ಚು ಆಸ್ತಿ ಹೊಂದಿದೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಎನ್. ರವೀಂದ್ರ ಆರೋಪವು ಅವರ ವೈಯಕ್ತಿಕ ಅಭಿಪ್ರಾಯ. ನಮ್ಮ ಪಕ್ಷದ ಇತಿಹಾಸದಲ್ಲೇ ದುಡ್ಡು ತೆಗೆದುಕೊಂಡು ಪಾಲಿರ್ಮೆಂಟ್, ಅಸೆಂಬ್ಲಿ ಸೀಟ್ ಕೊಟ್ಟಿರುವ ಆರೋಪ ಇದೆಯೇ? ಎಂದು ಪ್ರಶ್ನಿಸಿದರು.
ಯಾರು ಏನೇನು ಮಾಡಿಕೊಂಡಿದ್ದಾರೋ ನಮಗೆ ಗೊತ್ತಿಲ್ಲ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷರನ್ನೇ ಕೇಳಿ, ಆತರದ್ದು ಏನೂ ಇರುವುದಿಲ್ಲ. ಕಾಂಗ್ರೆಸ್ ನಲ್ಲಿ ಬಹಳ ಜನ ಆಕಾಂಕ್ಷಿಗಳಿದ್ದಾರೆ. ಸೀಟ್ ಸಿಗದಿದ್ದಾಗ ಹತಾಶರಾಗಿ ಕೆಲವರು ಮಾತನಾಡಿರುತ್ತಾರೆ. ಅದಕ್ಕೆಲ್ಲ ಹೆಚ್ಚು ಒತ್ತು ಕೊಡುವುದು ಬೇಡ ಎಂದರು.
ಲೋಕಸಭೆ ಚುನಾವಣೆ ಟಿಕೆಟ್ ಆದಷ್ಟು ಬೇಗ ಘೋಷಣೆ ಆಗಲಿದೆ. ಮಾರ್ಚ್ 10ರೊಳಗೆ ಮೊದಲ ಪಟ್ಟಿ ಬಿಡುಗಡೆ ಆಗಬಹುದು. ನಾಲ್ಕು ಅಥವಾ ಐದು ಕ್ಷೇತ್ರದಲ್ಲಿ ಆಕಾಂಕ್ಷಿಗಳು ಹೆಚ್ಚಿದ್ದಾರೆ, ಸ್ವಲ್ಪ ಒತ್ತಡಗಳಿವೆ. ಆದರೂ ಪಟ್ಟಿ ಶೀಘ್ರ ಅಂತಿಮಗೊಳ್ಳಲಿದೆ ಎಂದರು.
ಪಾಕ್ ಪರ ಘೋಷಣೆ ಕೂಗಿದವರನ್ನು ಕಾಂಗ್ರೆಸ್ನ ಎಲ್ಲರೂ ಖಂಡಿಸಿದ್ದೇವೆ. ಕೇಸ್ ಹಾಕಿ ಮುಂದಿನ ಕ್ರಮ ಕೂಡ ಕೈಗೊಳ್ಳಲಾಗಿದೆ. ಬಿಜೆಪಿಯವರು ಮಂಡ್ಯದಲ್ಲಿ ಪ್ರತಿಭಟನೆ ಮಾಡುವಾಗ ಕಾರ್ಯಕರ್ತನೊಬ್ಬ ದೇಶವಿರೋಧಿ ಘೋಷಣೆ ಕೂಗಿದರೂ ಅವರ ಪಕ್ಷದ ನಾಯಕರು ಖಂಡಿಸಲಿಲ್ಲ. ಪ್ರತಾಪ ಸಿಂಹ ಅವರಿಂದ ಪಾಸ್ ಪಡೆದು ಸಂಸತ್ನಲ್ಲಿ ಗ್ಯಾಸ್ ಬಾಂಬ್ ಸಿಡಿಸಿದಾಗ ಅವರ ರಾಜೀನಾಮೆ ಏಕೆ ಕೇಳಲಿಲ್ಲ? ಎಂದು ಪ್ರಶ್ನಿಸಿದರು.