ಪಿಎಂ ವಿಶ್ವಕರ್ಮ ಯೋಜನೆಗೆ 35 ಸಾವಿರ ಕೋಟಿ ಮೀಸಲು

IMG-20231017-WA0045
Published on

ಉಡುಪಿ: ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಹೊಸ ಮಾರುಕಟ್ಟೆ ಕಲ್ಪಿಸಿ, ಹೆಚ್ಚಿನ ಅವಕಾಶ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪಿಎಂ ವಿಶ್ವಕರ್ಮ ಯೋಜನೆ ಜಾರಿಗೊಳಿಸಿದ್ದು, ಇದಕ್ಕಾಗಿ 35 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ  ರಾಜ್ಯ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.

ಮಾಹೆ ಕ್ಯಾಂಪಸ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಕ್ಷೇತ್ರಗಳಲ್ಲಿ ಕೌಶಲ್ಯ ಹೊಂದಿದವರಿಗೆ ಹೆಚ್ಚಿನ ಅವಕಾಶಗಳು ಲಭಿಸುತ್ತಿವೆ. ಪದವಿ ಕೇವಲ ವಿಷಯದ ಅರಿವಿಗಾಗಿ ಮಾತ್ರ ಇದೆ. ಉದ್ಯೋಗದಲ್ಲಿ ಯಶಸ್ವಿಯಾಗಲು ಕೌಶಲ್ಯ ಬಹಳ ಮುಖ್ಯ ಎಂದರು.

 ಒಂದು ವರ್ಷದಲ್ಲಿ 65 ಲಕ್ಷದಿಂದ ಒಂದು ಕೋಟಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಪಿಎಂಕೆಇವೈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಕಾಲೇಜುಗಳ ಜೊತೆಗೆ ಖಾಸಗಿ ಕೇಂದ್ರಗಳಲ್ಲಿ ಕೌಶಲ್ಯ ತರಬೇತಿ ನೀಡಲಾಗುತ್ತದೆ. ವಿವಿಧ ಕೈಗಾರಿಕೆಗಳ ಸಹಯೋಗದಲ್ಲಿ ಸುಮಾರು 3,400 ವಿವಿಧ ಕೌಶಲ್ಯ ಕಾರ್ಯಕ್ರಮ ನಡೆಯುತ್ತಿವೆ ಎಂದರು.

ಭಾರತದಲ್ಲಿ ಮುಂದಿನ ದಶಕದಲ್ಲಿ ಕೃತಕ ಬುದ್ಧಿಮತ್ತೆ, ಸಿಂಥೆಟಿಕ್ ಬಯಾಲಜಿ, ಅಟೋನೋಮಸ್ ವೆಹಿಕಲ್ ಕ್ಷೇತ್ರಗಳಲ್ಲಿ ಹೆಚ್ಚಿನ ಅವಕಾಶಗಳನ್ನು ಲಭ್ಯವಾಗಲಿದೆ. ರೈತರಿಂದ ಹಿಡಿದು ಚಿಲ್ಲರೆ ವ್ಯಾಪಾರಿಗಳವರೆಗೆ ಎಲ್ಲಾ ಕ್ಷೇತ್ರಗಳಲ್ಲೂ ಈ ತಂತ್ರಜ್ಞಾನಗಳು ಪ್ರಮುಖ ಪಾತ್ರವಹಿಸಲಿವೆ. ಭಾರತವು ಅತಿದೊಡ್ಡ ಉದ್ಯೋಗ ಮಾರುಕಟ್ಟೆಯಾಗಿದ್ದು, ರೊಬೊಟಿಕ್ಸ್ ಲ್ಯಾಬ್, ಇಂಡಿಯಾ ಎಐ ಪ್ರೋಗ್ರಾಂ, ಸೆಮಿ ಕಂಡಕ್ಟರ್ ಪ್ರೋಗ್ರಾಂ ತಾಂತ್ರಿಕ ಪದವೀಧರರಿಗಾಗಿ ಪರಿಚಯಿಸಲಾಗಿದೆ ಎಂದರು.

 ತಮಿಳುನಾಡು, ಉತ್ತರ ಪ್ರದೇಶ, ಗುಜರಾತ್, ಆಂಧ್ರಪ್ರದೇಶದಂತಹ ರಾಜ್ಯಗಳು ಪ್ರಗತಿಪರ ನಾಯಕತ್ವವನ್ನು ಹೊಂದಿದ್ದು, ರಾಜಕೀಯ ಮಾಡುವುದರಲ್ಲಿ ನಿರತರಾಗಿರುವುದಿಲ್ಲ.  ಹೀಗಾಗಿ ಹೆಚ್ಚನ ಬಂಡವಾಳ ಅಕರ್ಷಿಸುತ್ತಿವೆ ಎಂದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net