ಎ-ಬಿ ಖಾತಾ ನೀಡಲು ಚಿಂತನೆ: ಸಚಿವ ರಹೀಂ ಖಾನ್

sanmana
ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿದ್ದ ರಹೀಂ ಖಾನ್ ಅವರನ್ನು ಪೌರ ನೌಕರರ ಸಂಘದಿಂದ ಸನ್ಮಾನಿಸಲಾಯಿತು. ಗುರುದತ್ತ ಹೆಗಡೆ, ಎಸ್.ರವಿಕುಮಾರ್, ಡಾ. ಕವಿತಾ ಯೋಗಪ್ಪನವರ್, ಬಲ್ಕಿಷ್ ಬಾನು, ಚಂದ್ರಭೂಪಲ್ ಇತರರಿದ್ದರು.
Published on

ಶಿವಮೊಗ್ಗ: ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿ ತೆರಿಗೆ ಸಂಗ್ರಹಣೆಯಲ್ಲಿ ಹಲವು ಲೋಪಗಳಿವೆ. 10 ವರ್ಷದ ಹಿಂದೆ ನಿರ್ಮಾಣವಾದ ಒಂದು ಮಹಡಿ ಕಟ್ಟಡಕ್ಕೆ ತೆರಿಗೆ ಪಡೆಯಲಾಗುತ್ತಿದೆ. ಅಲ್ಲಿ ಈಗ ಮೂರು ಮಹಡಿ ನಿರ್ಮಾಣವಾಗಿದ್ದರೂ ಯಾರೂ ಗಮನಿಸುತ್ತಿಲ್ಲ. ಹೀಗಾಗಿ ಅರ್ಧದಷ್ಟು ಆಸ್ತಿಗಳು ತೆರಿಗೆ ವ್ಯಾಪ್ತಿಯಲ್ಲೇ ಇಲ್ಲ ಎಂದು ಪೌರಾಡಳಿತ ಸಚಿವ ರಹೀಂ ಖಾನ್ ಹೇಳಿದರು.

ಸೋಮವಾರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಆಸ್ತಿ ತೆರಿಗೆ ಸಂಗ್ರಹ ಕುಂಠಿತವಾಗಲು ಆಸ್ತಿಗಳನ್ನು ಸಮರ್ಪಕವಾಗಿ ಗುರುತಿಸದೇ ಇರುವುದು ಮುಖ್ಯ ಕಾರಣ. ಇನ್ನು ಕೆಲವೆಡೆ ಮನೆಯೊಳಗೆ ಸಣ್ಣ ಪುಟ್ಟ ಕೈಗಾರಿಕೆಗಳಿದ್ದರೂ ಅದು ಗಮನಕ್ಕೆ ಬರುವುದೇ ಇಲ್ಲ. ಇದಕ್ಕಾಗಿ ಬಿಬಿಎಂಪಿ ಮಾದರಿಯಲ್ಲಿ ಆಸ್ತಿಗಳಿಗೆ ಎ-ಖಾತಾ ಹಾಗೂ ಬಿ-ಖಾತಾ ನೀಡಲು ನಿರ್ಧರಿಸಲಾಗಿದೆ ಎಂದರು.

ರಾಜ್ಯಾದ್ಯಂತ ಎ-ಖಾತಾ, ಬಿ-ಖಾತಾ ಜಾರಿಯಾದ ಬಳಿಕ ತೆರಿಗೆ ಸಂಗ್ರಹಣೆಗೆ ಶಕ್ತಿ ಸಿಗಲಿದೆ. ಜತೆಗೆ ಇ-ಆಸ್ತಿ ನೋಂದಣಿಗೂ ಇದರಿಂದ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಎಲ್ಲ ಆಸ್ತಿಗಳನ್ನು ಡ್ರೋನ್ ಮೂಲಕ ಸರ್ವೇ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಆಸ್ತಿ ತೆರಿಗೆ ಸಂಗ್ರಹಣೆಗೆ ಅಧಿಕಾರಿಗಳು ಒತ್ತು ನೀಡಬೇಕು. ಏಕೆಂದರೆ ತೆರಿಗೆ ಸಂಗ್ರಹಣೆಯ ಆಧಾರದಲ್ಲೇ ಆ ಸ್ಥಳೀಯ ಸಂಸ್ಥೆಗೆ ಅನುದಾನವೂ ನಿರ್ಧಾರವಾಗುತ್ತದೆ. ಕೆಲವೆಡೆ ಸ್ತ್ರೀಶಕ್ತಿ ಸಂಘಗಳಿಗೆ ತೆರಿಗೆ ಸಂಗ್ರಹಿಸುವ ಜವಾಬ್ದಾರಿ ನೀಡಲಾಗಿದೆ. ಅಲ್ಲಿ ಉತ್ತಮ ಬೆಳವಣಿಗೆಯಾಗಿದೆ. ಅದೇ ಮಾದರಿಯನ್ನು ಶಿವಮೊಗ್ಗ ಜಿಲ್ಲೆಗೂ ಅಳವಡಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.

ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್ ಬಾನು, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ, ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್, ರಾಜ್ಯ ಪೌರಾಡಳಿತ ನಿರ್ದೇಶನಾಲಯದ ವ್ಯವಸ್ಥಾಪಕ ನಿರ್ದೇಶಕ ಪ್ರಭುಲಿಂಗ ಕವಳೀಕಟ್ಟಿ ಇತರರಿದ್ದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೌರ ನೌಕರರ ಸಂಘದಿಂದ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಸಚಿವರು, ನೌಕರರ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನ ಮಾಡುವುದಾಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net