

ಮಂಗಳೂರು: ಯಾವುದೇ ಪ್ರದೇಶದಲ್ಲಿ ಭೂಕುಸಿತ, ಪ್ರವಾಹ ಇತ್ಯಾದಿ ಆಗುವ ಬಗ್ಗೆ ಮೊದಲೇ ಮಾಹಿತಿ ಪಡೆದು ಜನರನ್ನು ಸ್ಥಳಾಂತರಿಸಬೇಕು, ಯಾವುದೇ ಸಬೂಬು ನೀಡದೆ ಸರ್ಕಾರಕ್ಕೆ ಕೆಟ್ಟ ಹೆಸರು ಬಾರದಂತೆ ನೋಡಿಕೊಳ್ಳಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ನಿರ್ದೇಶನ ನೀಡಿದರು.
ಮಂಗಳೂರು ಜಿ.ಪಂ ಸಭಾಂಗಣದಲ್ಲಿ ಶನಿವಾರ ಮಳೆಹಾನಿ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಅಪಾಯಕಾರಿ ಪ್ರದೇಶಗಳಿಂದ ಸುರಕ್ಷಿತ ತಾಣಗಳಿಗೆ ಸ್ಥಳಾಂತರಗೊಳ್ಳಲು ಜನ ಕೇಳದಿದ್ದರೆ ಬಲವಂತವಾಗಿ ಪೊಲೀಸರ ಸಹಕಾರದೊಂದಿಗೆ ಸ್ಥಳಾಂತರಿಸಿ ಪ್ರಾಣ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಕೊಡಗಿನ ಘಟನೆ ನೋಡಿದ್ದೇವೆ. ಹಾಗಾಗಿ ಅನಾಹುತ ಸಂಭವಿಸುವ ಮೊದಲೇ ಕ್ರಮ ಕೈಗೊಳ್ಳಿ ಎಂದರು.
ಆಹಾರ ನೀಡಲು ಕಂಜೂಸಿ ಬೇಡ: ಪ್ರವಾಹ ಸಂತ್ರಸ್ತರಿಗೆ ಆಶ್ರಯ ನೀಡುವ ಕಾಳಜಿ ಕೇಂದ್ರಗಳಲ್ಲಿ ಗುಣಮಟ್ಟದ ಹಾಗೂ ಪೌಷ್ಟಿಕ ಆಹಾರ ಒದಗಿಸಬೇಕು. ಕೋಟಿಗಟ್ಟಲೆ ಮೊತ್ತವನ್ನು ಕೆಲಸ ಕಾರ್ಯಗಳಿಗೆ ಬಳಸುವಾಗ ನೊಂದವರಿಗೆ ಆಹಾರ ನೀಡಲು ಕಂಜೂಸಿ ತೋರಿಸುವುದು ಬೇಡ. ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಒಂದೇ ರೀತಿಯ ಆಹಾರದ ಬದಲು ನಿರಂತರವಾಗಿ ಬದಲಿಸುತ್ತಿರಬೇಕು ಎಂದರು.
ಶಾಸಕ ರಾಜೇಶ್ ನಾಯ್ಕ ಮಾತನಾಡಿ, ಬಂಟ್ವಾಳದಲ್ಲಿ ಈಗಾಗಲೇ ನೇತ್ರಾವತಿ ತುಂಬಿ ಹರಿಯುತ್ತಿದ್ದು ಗದ್ದೆ, ತೋಟಗಳಿಗೆ ನೀರು ನುಗ್ಗಿದೆ. ನೂರಾರು ಎಕರೆ ಮುಳುಗಡೆ ಆಗಿದೆ. ತಕ್ಷಣ ಪರಿಹಾರ ಬೇಕು ಎಂದು ಸಚಿವರ ಗಮನ ಸೆಳೆದರು. ಗುರುಪುರದಲ್ಲಿ ಭೂಕುಸಿತವಾಗಿ ಹಲವಾರು ಕುಟುಂಬಗಳಿಗೆ ತೊಂದರೆಯಾಗಿದ್ದು, ಅಲ್ಲಿ ತಡೆಗೋಡೆಗೆ 5 ಕೋಟಿ ರೂ.ಗಳನ್ನು ಒದಗಿಸಬೇಕೆಂದು ಶಾಸಕ ಉಮಾನಾಥ ಕೋಟ್ಯಾನ್ ಕೋರಿದರು. ಹಣ ಬಿಡುಗಡೆ ಮಾಡುವುದಾಗಿ ಸಚಿವ ಅಶೋಕ್ ತಿಳಿಸಿದರು.
ಶಾಸಕರಾದ ಡಾ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಸಂಜೀವ ಮಠಂದೂರು, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ತಮ್ಮ ಕ್ಷೇತ್ರಗಳಲ್ಲಿನ ಪ್ರವಾಹ ಪರಿಸ್ಥಿತಿ ಬಗ್ಗೆ ಸಚಿವರ ಗಮನ ಸೆಳೆದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾಧಿಕಾರಿ ಡಾ.ರಾಜೇಂದ್ರ, ಡಿಸಿಪಿ ಅರುಣಾಂಗ್ಶುಗಿರಿ, ಎಡಿಸಿ ರೂಪಾ ಉಪಸ್ಥಿತರಿದ್ದರು.
ತಕ್ಷಣ ಪರಿಹಾರ ವಿತರಣೆ: ಪರಿಹಾರ ಕಾರ್ಯಗಳಿಗೆ ಹಣಕ್ಕೆ ತೊಂದರೆ ಇಲ್ಲ. ಪ್ರವಾಹ ಪರಿಹಾರಕ್ಕಾಗಿ ಈಗಾಗಲೇ ಜಿಲ್ಲೆಗೆ 5 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ. ಕರೊನಾ ವೇಳೆ ಎಲ್ಲ ಅಧಿಕಾರಿಗಳೂ ಉತ್ತಮ ಕೆಲಸ ಮಾಡಿದ್ದೀರಿ, ಈಗ ಅದರೊಂದಿಗೆ ಅತಿವೃಷ್ಟಿ ಕಾಡುತ್ತಿದೆ, ಜನರ ಕಷ್ಟದ ಸಂದರ್ಭ ಸರ್ಕಾರ ಜತೆಗಿದೆ ಎನ್ನುವ ರೀತಿಯಲ್ಲಿ ಎಚ್ಚರಿಕೆ ವಹಿಸಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಸಚಿವರು ಸಲಹೆ ನೀಡಿದರು. ಮಳೆಗಾಲದಲ್ಲಿ ಮರ, ವಿದ್ಯುತ್ ಕಂಬ ಬಿದ್ದು, ಬಿರುಗಾಳಿಗೆ ಮನೆಯ ಮೇಲ್ಛಾವಣಿ ಹಾರಿ ಹಾನಿಯಾಗುವುದು ಸೇರಿದಂತೆ ಮನೆಯೊಳಗೆ ಒಂದಿಂಚು ನೀರು ಬಂದರೂ ತಕ್ಷಣ 10 ಸಾವಿರ ರೂ. ನೀಡಬೇಕು, ಈ ಬಗ್ಗೆ ಈಗಾಗಲೇ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ ಎಂದರು.
ಕೇಂದ್ರದಿಂದ ಮುನ್ನೆಚ್ಚರಿಕೆ ಮೊತ್ತ
ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಪ್ರಾಕೃತಿಕ ವಿಕೋಪದ ಮುನ್ನೆಚ್ಚರಿಕೆ ಕಾಮಗಾರಿಗಳಿಗಾಗಿ 110 ಕೋಟಿ ರೂ. ಅನುದಾನ ನೀಡಿದ್ದರು. ಈ ಬಾರಿ 310 ಕೋಟಿ ರೂ.ಗಳನ್ನು ನೀಡಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಪ್ರವಾಹ ಸೇರಿದಂತೆ ವಿಕೋಪಕ್ಕೆ ಸಂಬಂಧಿಸಿದ ಪರಿಹಾರ ಕಾರ್ಯಗಳಿಗೆ ಹಣದ ಕೊರತೆ ಇಲ್ಲ ಎಂದು ಸಚಿವ ಅಶೋಕ್ ಸ್ಪಷ್ಟಪಡಿಸಿದರು.