

ಶಿರಾ: ಸಮ್ಮಿಶ್ರ ಸರ್ಕಾರ ಇದ್ದಾಗ 17 ಶಾಸಕರನ್ನು ಮುಂಬೈಗೆ ಕಳುಹಿಸಿದ್ದು ಯಾರು ಅಂತಾ ಸಿದ್ದರಾಮಣ್ಣ ಹೇಳಬೇಕು. ಇನ್ನೂ 15 ವರ್ಷ ಬಿಜೆಪಿ ಆಡಳಿತ ಇರಲಿದೆ. ಈ ಸತ್ಯ ಕಾಂಗ್ರೆಸ್ನವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿರುಗೇಟು ನೀಡಿದರು.
ನಗರದ ಬಿಜೆಪಿ ಚುನಾವಣಾ ಪ್ರಚಾರ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿರಾ ಉಪಸಮರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಈಗಲೇ ಸೋಲು ಒಪ್ಪಿಕೊಂಡಂತಿದೆ. ಹಣ-ಹೆಂಡ ಹಂಚುತ್ತಿದ್ದಾರೆಂದು ವಿಜಯೇಂದ್ರ ಹೆಸರು ಹೇಳುತ್ತಿದ್ದಾರೆ. ಯುದ್ಧಕ್ಕೆ ಮುನ್ನವೇ ಶಸ್ತ್ರತ್ಯಾಗ ಮಾಡಿರುವ ಪ್ರತಿಪಕ್ಷಗಳ ಮುಖಂಡರಿಗೆ ಬಿಜೆಪಿ ಭಯ ಕಾಡುತ್ತಿದೆ ಲೇವಡಿ ಮಾಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ಗೆ ಮೊದಲ ಸೋಲಿನ ರುಚಿ ಈ ಬಾರಿ ಬಿಜೆಪಿ ತೋರಿಸುತ್ತೆ. ಟ್ರಬಲ್ ಶೂಟರ್ ಎಂದುಕೊಂಡು ಬಳ್ಳಾರಿಯಲ್ಲಿ ಆಡಿದ್ದ ಆಟ ಇಲ್ಲಿ ನಡೆಯಲ್ಲ. ಕಾಂಗ್ರೆಸ್ ನಂಬಿಕೆ, ವಿಶ್ವಾಸದ ಪಕ್ಷವಾಗಿ ಉಳಿದಿಲ್ಲ. ಪ್ರತಿಭಟನೆಯ ರಾಜಕೀಯ ಮಾಡುತ್ತಿದೆ ಎಂದು ಜರಿದ ಅಶೋಕ್, ಕೆಜಿ ಹಳ್ಳಿ, ಡಿಜೆ ಹಳ್ಳಿಯ ಘಟನೆ ಇಡೀ ಬೆಂಗಳೂರು ನಡುಗಿಸಿದೆ, ದಲಿತ ಶಾಸಕನ ಮೇಲೆ ಹಲ್ಲೆ ನಡೆದಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಏಕೆ ಪ್ರತಿಭಟನೆ ಮಾಡಲಿಲ್ಲ. ಡಿಕೆಶಿ, ಸಿದ್ದರಾಮಯ್ಯನವರೇ ಆಗ ನೀವು ಎಲ್ಲಿದ್ರಿ? ಈಗ ಚುನಾವಣೆಗೋಸ್ಕರ ಪ್ರತಿಭಟನೆ ಮಾಡ್ತಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಎಸ್.ಆರ್.ಗೌಡ ಇತರರಿದ್ದರು.
ಡಿಕೆಶಿ ಟೆಸ್ಟ್ ಡ್ರೈವ್ ಕಾರಿದ್ದಂತೆ!: ಜಯಚಂದ್ರಗೆ ಟಿಕೆಟ್ ಕೊಡೋದು ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾಗೆ ಇಷ್ಟ ಇರಲಿಲ್ಲ. ಈ ಚುನಾವಣೆಯಲ್ಲಿ ಡಿಕೆಶಿ ಟೆಸ್ಟ್ ಡ್ರೈವ್ ಕಾರಿದ್ದಂತೆ, ಯೂಸ್ ಆ್ಯಂಡ್ ಥ್ರೋ ಮಾಡ್ತಾರೆ. ಕಾಂಗ್ರೆಸ್ನವರು ಡಿಕೆಶಿ ಅವರನ್ನು ಕಸದ ತೊಟ್ಟಿಗೆ ಹಾಕ್ತಾರೆ ಎಂದು ಛೇಡಿಸಿದ ಅಶೋಕ್, ಸಿದ್ದರಾಮಯ್ಯ ಈಗೀಗ ಬಿಜೆಪಿಗೆ ಧಮ್ ಇದೆಯಾ ಅಂತಾರೆ. ಮುಂಚೆ ಹೀಗೆ ಹೇಳುತ್ತಿರಲಿಲ್ಲ. ಧಮ್ ಇರೋದ್ರಿಂದನೇ ರಾಮಮಂದಿರ ಕಟ್ಟಲು ಶಿಲಾನ್ಯಾಸ ಮಾಡಿದ್ದು, 370ನೇ ಕಾಯ್ದೆ ರದ್ದು, ತ್ರಿವಳಿ ತಲಾಖ್ ರದ್ದು ಮಾಡಿದ್ದು ಎಂದು ಟಾಂಗ್ ಕೊಟ್ಟರು.
ನೋ ಎಂಟ್ರಿ ಬೋರ್ಡ್ ಹಾಕಿದ್ದರು!: ಕರೊನಾ ಸಂದರ್ಭದಲ್ಲಿ ಸಿದ್ದರಾಮಯ್ಯ ಮನೆಯಲ್ಲಿ ಕೂತುಕೊಂಡು ಗೇಟ್ಗೆ ನೋ ಎಂಟ್ರಿ ಬೋರ್ಡ್ ಹಾಕಿಕೊಂಡಿದ್ದರು. ಯಡಿಯೂರಪ್ಪ ಕೋವಿಡ್ ಸಂದರ್ಭದಲ್ಲಿ ಈ ವಯಸ್ಸಿನಲ್ಲೂ ಓಡಾಡಿ ಕೆಲಸ ಮಾಡಿದ್ದಾರೆ. ಆದರೂ, ಸಿದ್ದರಾಮಯ್ಯ ವೃಥಾ ಆರೋಪ ಮಾಡುತ್ತಾರೆ. ಸಿದ್ದರಾಮಯ್ಯ ಎರಡೆರಡು ಮಾಸ್ಕ್ ಹಾಕೊಂಡು ಮನೆಯಲ್ಲಿ ಕೂತಿದ್ದರು. ಈಗ ಚುನಾವಣೆ ಅಂತಾ ಹೊರಗೆ ಬಂದಿದ್ದಾರೆ ಎಂದು ಲೇವಡಿ ಮಾಡಿದರು.