ಜನರು ಕಾಂಗ್ರೆಸ್ ನವರನ್ನೇ ಗೋ ಬ್ಯಾಕ್ ಮಾಡಿದ್ದಾರೆ; ನಮ್ಮನ್ನೇನು ಅವರು ಗೋ ಬ್ಯಾಕ್ ಮಾಡೋದು ಎಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

Pralhad Joshi
Published on

ಹುಬ್ಬಳ್ಳಿ: ಜನರು ಕಾಂಗ್ರೆಸ್​ನವರನ್ನೇ ಗೋಬ್ಯಾಕ್ ಮಾಡಿದ್ದಾರೆ. ಅವರು ನಮ್ಮನ್ನೇನು ಗೋಬ್ಯಾಕ್ ಮಾಡುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೋಮವಾರ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನಕ್ಕೆ ಕಾಂಗ್ರೆಸ್ ನಿಂದ ಗೋ ಬ್ಯಾಕ್ ಪ್ರತಿಭಟನೆ ಹಿನ್ನೆಲೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಸಿಎಎ ಹಾಗೂ ಎನ್ ಆರ್ ಸಿ ಕಾಯ್ದೆ ವಿಚಾರದಲ್ಲಿ ಕಾಂಗ್ರೆಸ್ ನವರು ಜನರ ಹಾದಿ ತಪ್ಪಿಸುತ್ತಿದ್ದಾರೆ. ಕಾಂಗ್ರೆಸ್ ನವರಿಗೆ ಅಮೀತ್ ಶಾ ಹಾಗೂ ಮೋದಿ ವಿರುದ್ಧ ಆರೋಪ ಮಾಡಲು ಯಾವುದೇ ವಿಷಯಗಳಿಲ್ಲ. ಹೀಗಾಗಿ ಪೌರತ್ವ ಕಾಯ್ದೆ ವಿಚಾರದಲ್ಲಿ ಸುಖಾ ಸುಮ್ಮನೇ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಸಚಿವ ಸಂಪುಟ ರಚನೆ ವಿಚಾರವನ್ನು ಮುಖ್ಯಮಂತ್ರಿ ಬಿಎಸ್ ವೈ ಪಕ್ಷದ ವರಿಷ್ಠರೊದಿಗೆ ಚರ್ಚೆ ಮಾಡಿದ್ದಾರೆ. ಆ ವಿಚಾರ ಅವರಿಗೆ ಬಿಟ್ಟದ್ದು‌ ಅವರ ಹೇಳಿಕೆಯೇ ನಮ್ಮ ಹೇಳಿಕೆ ಎಂದು ಜೋಶಿ ಪ್ರತಿಕ್ರಿಯಿಸಿದರು.

ಬಿಜೆಪಿ ನಾಯಕರ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ತಾಳ, ತಮಟೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಜೋಶಿ, ಸಿದ್ಧರಾಮಯ್ಯ ಅವರು ಸುಳ್ಳು ಹೇಳಿಕೆಗಳನ್ನ ನೀಡುವುದರಲ್ಲಿ ನಿಸ್ಸೀಮರು. ಜನರು ಅವರ ಕೈಯಲ್ಲಿದ್ದ ತಾಳ, ತಮಟೆಗಳನ್ನು ಕಸಿದುಕೊಂಡು ಮನೆಗೆ ಕಳಿಸಿದ್ದಾರೆ. ಸಿದ್ಧರಾಮಯ್ಯ ಇಂತಹ ಅಸಂಭದ್ದ ಹೇಳಿಕೆಗಳನ್ನ ನೀಡುವುದನ್ನ ಬಿಡಬೇಕು ಎಂದು ತಿರುಗೇಟು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net