

ಶಿವಮೊಗ್ಗ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಸಿಎಂ ಸಿದ್ದರಾಮಯ್ಯ ಭಯೋತ್ಪಾದಕನೆಂದು ಟೀಕಿಸಿದ್ದಾರೆ. ಜೋಶಿ ಅವರು ಭಯೋತ್ಪಾದಕರಲ್ಲ, ಅಪ್ಪಟ ರಾಷ್ಟ್ರಭಕ್ತ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪತಿಳಿಸಿದರು.
ಕಾಂಗ್ರೆಸ್‌ನವರಿಗೆ ಭಯೋತ್ಪಾದಕರು ಅಣ್ಣತಮ್ಮಂದಿರಂತೆ ಕಾಣುತ್ತಾರೆ. ಅಣ್ಣತಮ್ಮಂದಿರು ಭಯೋತ್ಪಾದಕರಂತೆ ಕಾಣುತ್ತಾರೆ. ಇದು ಸದ್ಯದ ರಾಜ್ಯ ಪರಿಸ್ಥಿತಿಯಾಗಿದೆ ಎಂದು ಶಾಸಕ ಚನ್ನಬಸಪ್ಪ ವ್ಯಂಗ್ಯವಾಡಿದರು. ಅಮಾಯಕ ಹಿಂದುಗಳ ಮೇಲೆ ವಿನಾಕಾರಣ ಪ್ರಕರಣ ದಾಖಲಿಸಿ ಕೋರ್ಟ್‌ಗೆ ಅಲೆದಾಡಿಸುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಿಜೆಪಿ ಅರ್ಬನ್ ನಕ್ಸಲ್ ಎಂದರೆ, ಸಿಎಂ ಸಿದ್ದರಾಮಯ್ಯ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಭಯೋತ್ಪಾದಕನೆಂದು ಕರೆಯುತ್ತಾರೆ. ರಾಜ್ಯ ರಾಜಕಾರಣ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರೂ ಅದನ್ನು ಬೆಂಬಲಿಸುವುದಿಲ್ಲ. ಆದರೆ ಕಾನೂನು ಕೈಗೆ ತೆಗೆದುಕೊಳ್ಳುವರನ್ನು ಅಮಾಯಕರೆಂದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.