

ಬಸವನಬಾಗೇವಾಡಿ: ಮತಕ್ಷೇತ್ರದ ಅಭಿವೃದ್ಧಿಗೆ ಸಚಿವ ಶಿವಾನಂದ ಪಾಟೀಲ ಹಲವಾರು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸಹಕಾರಿ ಮಹಾಮಂಡಳಿ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.
ತಾಲೂಕಿನ ಮನಗೂಳಿ ಪಟ್ಟಣದ ಶ್ರೀ ವಿನಾಯಕ ವಿವಿಧೋದ್ದೇಶಗಳ ಸಹಕಾರಿ ಸಂಘದ ಸಭಾಭವನದಲ್ಲಿ ಸೋಮವಾರ ಪಪಂ ನೂತನ ಅಧ್ಯಕ್ಷ- ಉಪಾಧ್ಯಕ್ಷರ ಹಾಗೂ ಸರ್ವ ಸದಸ್ಯರ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮತಕ್ಷೇತ್ರದಲ್ಲಿನ ಮನಗೂಳಿ, ಕೊಲ್ಹಾರ, ನಿಡುಗುಂದಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸುವ ಮೂಲಕ ಮೂರೂ ಪಟ್ಟಣದಲ್ಲಿ ಒಳಚರಂಡಿ, ಕುಡಿಯುವ ನೀರು, ಸಿ.ಸಿ. ರಸ್ತೆ ಸೇರಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದಾರೆ ಎಂದರು.
ವಿಜಯಪುರ ಡಿಸಿಸಿ ಬ್ಯಾಂಕ್ ನಿರ್ದೇಶಕ, ಜಿಪಂ ಮಾಜಿ ಅಧ್ಯಕ್ಷ ಚಂದ್ರಶೇಖರಗೌಡ ಪಾಟೀಲ ಮಾತನಾಡಿ, ನೂತನ ಅಧ್ಯಕ್ಷ, ಉಪಾಧ್ಯಕ್ಷರು ಪಟ್ಟಣದ ಅಭಿವೃದ್ಧಿಗೆ ಮುಂದಾಗಬೇಕಲ್ಲದೆ, ಅರ್ಹರಿಗೆ ಆಶ್ರಯ ಮನೆಗಳನ್ನು ತಲುಪಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಬೇಕೆಂದು ತಿಳಿಸಿದರು.
ಪಪಂ ನೂತನ ಅಧ್ಯಕ್ಷ ಡಾ. ಮಳಸಿದ್ದಪ್ಪ ಮೇತ್ರಿ ಸನ್ಮಾನ ಸ್ವೀಕರಿಸಿ ಮಾತನಾಡಿ, ನನ್ನ ಗೆಲುವಿಗೆ ಕಾರಣರಾದ ಪಪಂ ಸದಸ್ಯರು ಹಾಗೂ ಜನತೆಯ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕಾರ್ಯ ಮಾಡುವೆ. ಸಚಿವ ಶಿವಾನಂದ ಪಾಟೀಲ ಅವರ ಮಾರ್ಗದರ್ಶನದಲ್ಲಿ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವೆ ಎಂದರು.
ಬ್ಯಾಂಕ್ ಅಧ್ಯಕ್ಷ ವಿಶ್ವನಾಥಗೌಡ ಪಾಟೀಲ, ಪಪಂ ಉಪಾಧ್ಯಕ್ಷ ಶೇಕಪ್ಪಗೌಡ ಬಿರಾದಾರ, ಸದಸ್ಯರಾದ ತೇಜಸ್ವಿನಿ ರಜಪೂತ, ಶಂಕರ ಶಿವಮತ ರಮೇಶ ಹಾರಿವಾಳ, ಮುಖಂಡರಾದ ರಾಜುಗೌಡ ಪಾಟೀಲ, ಶ್ರೀಶೈಲ ಸಜ್ಜನ, ಮಹಾಂತಗೌಡ ಗುಜಗೊಂಡ, ಬಸವರಾಜ ಸೋಂಪುರ್, ದ್ಯಾಮನಗೌಡ ಪಾಟೀಲ, ಬಂದೇನಮಾಜ ಡೋಲಜಿ ಇತರರಿದ್ದರು.