

ಶಿಗ್ಗಾಂವಿ: ಶಿಗ್ಗಾಂವಿ- ಸವಣೂರ ಮಾರ್ಗ ಮಧ್ಯೆ ರಸ್ತೆ ಅಪಘಾತದಲ್ಲಿ ಮರಣ ಹೊಂದಿದ್ದ ತಾಲೂಕಿನ ಕಲ್ಯಾಣ ಗ್ರಾಮದ ಕಲ್ಮೇಶ ಮಾನೋಜಿ ಅವರ ಮನೆಗೆ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ ಒಂದು ಲಕ್ಷ ರೂ. ನೆರವು ನೀಡಿದರು.
ನಂತರ ಮಾತನಾಡಿದರ ಅವರು, ಹಾವೇರಿ ಹತ್ತಿರ ನಡೆದ ಭೀಕರ ಅಪಘಾತ ಮಾಸುವ ಮುನ್ನವೇ ಮತ್ತೊಂದು ಮನ ಕುಲಕುವ ಕಾರು ಅಪಘಾತ ನಡೆದಿದೆ. ಮೃತ ಕುಟುಂಬಸ್ಥರ ಗೋಳಾಟ ನೋಡಿ, ನಮ್ಮೆಲ್ಲರ ಕಣ್ಣು ಒದ್ದೆಯಾಗಿಸಿತ್ತು. ಮನೆಗೆ ಆಸರೆಯಾಗಬೇಕಾಗಿದ್ದ ವಯಸ್ಸಿಗೆ ಬಂದ ಮಕ್ಕಳನ್ನು ಕಳೆದುಕೊಂಡ ಪಾಲಕರ ಗೋಳು ಹೇಳತೀರದು. ದೇವರು ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದರು.
ನಂದಗಡದ ಸಂಗೊಳ್ಳಿ ರಾಯಣ್ಣನ ಗದ್ದುಗೆ ದರ್ಶನಕ್ಕೆ ತೆರಳುತ್ತಿದ್ದ 7ಜನ ಯುವಕರಲ್ಲಿ ಶನಿವಾರ ಚಾಲಕ ಸೇರಿ ನಾಲ್ವರು ಮೃತಪಟ್ಟಿದ್ದರು. ಇಂದು ಗಾಯಾಳು ಇನ್ನೊಬ್ಬ ಯುವಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಮೃತ ಐವರ ಕುಟುಂಬಗಳಿಗೆ ನಾನು ವೈಯಕ್ತಿಕವಾಗಿ ತಲಾ ಒಂದು ಲಕ್ಷ ರೂ. ನೆರವು ನೀಡಿದ್ದೇನೆ. ಘಟನೆ ಕುರಿತು ಮುಖ್ಯಮಂತ್ರಿಗಳಿಗೆ ಪೋನ್ ಮೂಲಕ ವಿಷಯ ತಿಳಿಸಿದಾಗ ಅವರು ಸರ್ಕಾರದಿಂದ ತಲಾ 2 ಲಕ್ಷ ರೂ.ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ ಎಂದರು.
ಯುವಕರು ವಾಹನ ಚಲಾವಣೆ ಸಮಯದಲ್ಲಿ ಜಾಗರೂಕತೆ ವಹಿಸಬೇಕು. ಇಂತಹ ದುರ್ಘಟನೆ ನಡೆದರೆ ನಿಮ್ಮ ಮೇಲೆ ಅವಲಂಬಿತ ತಂದೆ, ತಾಯಿ ಮತ್ತು ಸಂಬಂಧಿಕರು ನಿಮ್ಮ ನೆನಪಿನಲ್ಲಿಯೇ ಕೊರಗಬೇಕಾಗುತ್ತದೆ. ಆದ್ದರಿಂದ ವಾಹನ ಚಾಲಕರು ರಸ್ತೆ ನಿಯಮಗಳನ್ನು ಪಾಲಿಸಿ ನಿಧಾನವಾಗಿ, ಸುರಕ್ಷಿತವಾಗಿ ವಾಹನ ಚಲಾಯಿಸಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಗಡಿ ಪ್ರಾಧಿಕಾರದ ಅಧ್ಯಕ್ಷ ಸೊಮಣ್ಣ ಬೇವಿನಮರದ, ಮುಖಂಡ ಯಾಸೀರಖಾನ್ ಪಠಾಣ, ಮಾಜಿ ಶಾಸಕ ಅಜೀಮ್‌ಪೀರ್ ಖಾದ್ರಿ, ಬಸನಗೌಡ ಪಾಟೀಲ, ಮಹಾಂತೇಶ ಸಾಲಿ, ಗುಡ್ಡಪ್ಪ ಜಲದಿ, ಅಣ್ಣಪ್ಪ ನಡಟ್ಟಿ, ಸುರೇಶ ಮಾನೋಜಿ, ಎಸ್.ಎಫ್. ಮಣಕಟ್ಟಿ ಮತ್ತಿತರರು ಉಪಸ್ಥಿತರಿದ್ದರು.